ಚಿತ್ರದುರ್ಗ: ಭಾರತದ ಸಂವಿಧಾನದಡಿ ರೂಪುಗೊಂಡಿರುವ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ದೇಶವನ್ನು ಸಮರ್ಥವಾಗಿ ಮುನ್ನೆಡೆಸಿ ಸರ್ವರಿಗೂ ಸಮಾನ ಅವಕಾಶಗಳನ್ನು ದೊರಕುವಂತೆ ಮಾಡುತ್ತಿವೆ. ಸಂವಿಧಾನ ವಿಷಯವನ್ನು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತಗೊಳಿಸಬೇಡಿ ಎಂದು ಹೈಕೋರ್ಟ್‍ನ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ್ ಅವರು ಹೇಳಿದರು.
ಅವರು (ಏ.4) ರಂದು ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸರಸ್ವತಿ ಕಾನೂನು ಕಾಲೇಜು ಹಾಗೂ ಎಸ್.ಜೆ.ಎಂ ಕಾನೂನು ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ‘ಸಂವಿಧಾನ ಓದು’ ಕಾನೂನು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶ ಜಾತ್ಯತೀತ ಸಾರ್ವಬೌಮ ರಾಷ್ಟ್ರ, ಸಂವಿಧಾನ ಅನುಷ್ಠಾನಕ್ಕೆ ಬರುವ ಮುನ್ನ ರಾಜ ಪ್ರಭುತ್ವ ವ್ಯವಸ್ಥೆ ಇತ್ತು. ರಾಜರ ನಿರ್ಣಯವೆ ಅಂತಿಮವಾಗುತ್ತಿತ್ತು, ಪ್ರಜೆಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿಕೊಳ್ಳುವ ಅವಕಾಶವೇ ಇರಲಿಲ್ಲ. ನಮ್ಮ ದೇಶವನ್ನು ಪೋರ್ಚುಗೀಸರು, ಡಚ್ಚರು, ಫ್ರೆಂಚರು ಹಾಗೂ ಬ್ರಿಟೀಷರು ಆಳ್ವಿಕೆ ನಡೆಸಿ, ಅವರಿಚ್ಚೆಯಂತೆ ಕಾನೂನು ರೂಪಿಸಿಕೊಂಡು ದಬ್ಬಾಳಿಕೆ ನಡೆಸಿದರು. ದೇಶದ ಸ್ವಾತಂತ್ರ್ಯ ನಂತರ ಸಂವಿಧಾನವನ್ನು ಅನುಷ್ಠಾನಗೊಳಿಸಿಕೊಂಡು ಪ್ರತಿಯೊಬ್ಬರು ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಂಡು, ಕಾನೂನಿನ ಚೌಕಟ್ಟಿನೊಳಗೆ ಇಚ್ಛಾನುಸಾರ ಜೀವಿಸುವ ಹಕ್ಕನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಸಂವಿಧಾನದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ದೇಶವನ್ನು ಮುನ್ನೆಡೆಸಿ ಸಮಾನ ಅವಕಾಶಗಳನ್ನು ಪ್ರತಿಯೊಬ್ಬರಿಗು ದೊರಕುವಂತೆ ಮಾಡುತ್ತಿವೆ. ಮಹಿಳೆಯರು, ದಲಿತರು, ಬುಡಕಟ್ಟು ಹಾಗೂ ಹಿಂದುಳಿದ ಜನರು ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಸಂವಿಧಾನ ಮಾಡಿದೆ. ಸಂವಿಧಾನದ ಅರಿವು ಪ್ರತಿಯೊಬ್ಬರಿಗೂ ತಿಳಿಯಲೆಂದು ಕಳೆದ 10 ವರ್ಷಗಳಿಂದ ಶೈಕ್ಷಣಿಕವಾಗಿ ಪ್ರತಿ ಕೋರ್ಸಿನ ವಿದ್ಯಾರ್ಥಿಗಳು ಓದಲೆಂದು 100 ಅಂಕದ ವಿಷಯ ಪತ್ರಿಕೆ ಸೇರ್ಪಡೆಗೊಳಿಸಿದೆ. ಆದರೆ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಅದನ್ನು ಓದುತ್ತಿದ್ದಾರೆ ಹೊರತು, ಸಂವಿಧಾನದ ಮಹತ್ವ ಹಾಗೂ ಸಾರಾಂಶ ಅರ್ಥೈಸಿಕೊಳ್ಳಲು ಯಾರು ಮುಂದಾಗುತ್ತಿಲ್ಲ ಎಂದು ವಿಷಾದಿಸಿದರು. ವಂಶಪಾರಂಪರ್ಯ ವೃತ್ತಿ ತ್ಯಜಿಸಿ, ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶವನ್ನು ಮಾಡಿ ಕೊಟ್ಟಿರುವುದು ನಮ್ಮ ಸಂವಿಧಾನದ ಹಿರಿಮೆಯಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮಾತನಾಡಿ, ಭಾರತದ ಸಂವಿಧಾನ ವಿಶ್ವದ ಅತಿದೊಡ್ಡ ಹಾಗೂ ಉನ್ನತ ಸಂವಿಧಾನ, ವಿವಿಧತೆಯಲ್ಲಿ ಏಕತೆ ಹೊಂದಿದ್ದು, ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ವಯಸ್ಸಾದ ಪ್ರತಿಯೊಬ್ಬರಿಗೂ ಮತದಾನದ ಅವಕಾಶ ಕಲ್ಪಿಸಿ ಸಮಾನತೆಯನ್ನು ನೀಡಲಾಗಿದೆ. ಬರುವ ಏ.18 ರಂದು ಲೋಕಸಭೆ ಚುನಾವಣೆ ನಿಮಿತ್ಯ ಮತದಾನ ನಡೆಯಲಿದ್ದು, ಎಲ್ಲ ಮತದಾರರೂ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು.
ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಮಾತನಾಡಿ, ಪ್ರತಿಯೊಬ್ಬರು ಮೂಲಭೂತ ಆಹಾರ, ವಸತಿ, ಅಗತ್ಯಕ್ಕೆ ತಕ್ಕ ಸೌಲಭ್ಯವನ್ನು ಹೊಂದುವಂತೆ ಸಂವಿಧಾನ ಅವಕಾಶ ಕಲ್ಪಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು, ತಾನಿಚ್ಚಿಸಿದ ಹುದ್ದೆ, ಧರ್ಮ ಮತ್ತು ವೈಯಕ್ತಿಕ ಜೀವನವನ್ನು ರೂಪಿಸಿಕೊಳ್ಳುವ ವ್ಯವಸ್ಥೆಯನ್ನು ನೀಡಿದೆ. ಸರ್ವರ ಕಲ್ಯಾಣ, ಜನಾಂಗೀಯ ಕಲ್ಯಾಣವನ್ನು ಸಂವಿಧಾನ ಬಯಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ, ಹುಬ್ಬಳ್ಳಿ ಕಾನೂನು ವಿವಿ ಕುಲಸಚಿವ ಜಿ.ಬಿ. ಪಾಟೀಲ್ ಹಾಗೂ ಸರಸ್ವತಿ ಕಾನೂನು ಕಾಲೇಜು ಪ್ರಾಚಾರ್ಯೆ ಎಂ.ಎಸ್. ಸುಧಾದೇವಿ ಉಪನ್ಯಾಸ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ, ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್ ದಿಂಡಲಕೊಪ್ಪ, ವಕೀಲರ ಸಂಘದ ಅಧ್ಯಕ್ಷ ಎನ್.ಬಿ ವಿಶ್ವನಾಥ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ರಾಧ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಾನೂನು ವಿದ್ಯಾರ್ಥಿಗಳು ಹಾಗೂ ಬಿ.ಇಡಿ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.