ಚಿತ್ರದುರ್ಗ: ಸಂತಸೇವಾಲಾಲ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕಾಗಿರುವುದರಿಂದ ಬಂಜಾರ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನಾಗೇಂದ್ರನಾಯ್ಕ ಮನವಿ ಮಾಡಿದರು.
ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಹಾಗೂ ಬಂಜಾರ ಸಮುದಾಯದ ಸಂಘಟನೆಗಳಿಂದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಸಂತಸೇವಾಲಾಲ್ ಜಯಂತಿ ಆಚರಿಸಿ ಫೆ.15 ರಂದು ತ.ರಾ.ಸು.ರಂಗಮಂದಿರದಲ್ಲಿ ಆಚರಿಸಲಾಗುವ ಸಂತಸೇವಾಲಾಲ್ ಜಯಂತಿಯಲ್ಲಿ ಬಂಜಾರ ಜನಾಂಗದವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಸೇವಾಲಾಲ್‍ರವರ ತತ್ವ ಸಿದ್ದಾಂತಗಳನ್ನು ತಿಳಿದುಕೊಂಡು ಜೀವನದಲ್ಲಿ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ವಿನಂತಿಸಿದರು.
ಸಾಮಾಜಿಕ ಕಾರ್ಯಕರ್ತ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡುತ್ತ ಸಮಾಜ ಸುಧಾರಕ ಲಂಬಾಣಿ ಜನಾಂಗದ ಆರಾಧ್ಯ ದೈವ ಸಂತ ಸೇವಾಲಾಲ್‍ರವರ ಜಯಂತಿಯಲ್ಲಿ ಬಂಜಾರ ಸಮುದಾಯದವರು ತಪ್ಪದೆ ಪಾಲ್ಗೊಂಡು ಸೇವಾಲಾಲ್ ಜಯಂತಿಯನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಆರ್.ಮಂಜನಾಯ್ಕ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಬಂಜಾರ ಸಮಾಜದವರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲರೂ ಒಂದಾಗಿ ಸಂತಸೇವಾಲಾಲ್ ಜಯಂತಿಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಂಗನಾಯ್ಕ, ರಮೇಶ್‍ನಾಯ್ಕ, ಜಯಣ್ಣ, ತಿಪ್ಪೇಸ್ವಾಮಿ, ಅನಿಲ್‍ಕುಮಾರ್, ಅನಂತನಾಯ್ಕ, ವೆಂಕಟೇಶ್‍ನಾಯ್ಕ, ಜಗದೀಶ್, ಅನಂತ, ರವಿ, ಗೋಪಿನಾಯ್ಕ ಇನ್ನು ಮುಂತಾದವರು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.