ಚಿತ್ರದುರ್ಗ: ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಕಲಾ ಕ್ಷೇತ್ರದಲ್ಲಿ ಶ್ರೀಮಂತಿಕೆ ಹೊಂದಿದ್ದು, ನೂರಾರು ಕಲಾವಿದರನ್ನು ನಾಡಿಗೆ ಕೊಡುಗೆ ನೀಡಿದ ಕಲಾ ಪ್ರೋತ್ಸಾಹ ಭೂಮಿಯಾಗಿದೆ ಎಂದು ಕುರುಬ ಸಂಘದ ಜಿಲ್ಲಾಧ್ಯಕ್ಷ ಎಸ್.ಶ್ರೀರಾಮ್ ಹೇಳಿದರು.

ರೂಟ್ಸ್ ನೃತ್ಯ ಶಾಲೆ ವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆ ಹಾಗೂ ನೃತ್ಯ ಸಂಭ್ರಮಕ್ಕೆ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮೂಲಕ ಚಾಲನೆ ನೀಡಿ ಮಾತನಾಡಿದರು.

ಡಾ.ರಾಜ್ ಸೇರಿ ಅನೇಕ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಿದ ಕರ್ಮಭೂಮಿ ಚಿತ್ರದುರ್ಗ. ಬಡತನ, ಬರಗಾಲದಿಂದ ಗುರುತಿಸಿಕೊಂಡಿರುವಂತೆ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಿದ ಕೀರ್ತಿಯೂ ಚಿತ್ರದುರ್ಗ ಜಿಲ್ಲೆಗೆ ಇದೆ ಎಂದರು.

ಜಿಲ್ಲೆಯಲ್ಲಿ ಕಲಾವಿದರು ಸಪ್ತಪ್ರತಿಭೆಗಳಾಗಿದ್ದು, ಇವರನ್ನು ಮುಖ್ಯವಾಹಿನಿಗೆ ತರಲು ಪ್ರಥಮ ಬಾರಿಗೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಿರುವುದು ಮಾದರಿ ಕಾರ್ಯವಾಗಿದೆ. ಬೆಂಗಳೂರು, ಮೈಸೂರಿನಂತ ದೊಡ್ಡ ನಗರಗಳಿಗೆ ಸೀಮಿತವಾಗಿರುವ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆ ಚಿತ್ರದುರ್ಗದಲ್ಲಿ ನಡೆಸುತ್ತಿರುವುದು ಜಿಲ್ಲೆಯ ಕಲಾವಿದರಿಗೆ ವರದಾನವಾಗಿದೆ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ವೇದಿಕೆ ಅಧ್ಯಕ್ಷ ಟಿ.ಆನಂದ್ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಕಿಚ್ಚು, ಆದರ್ಶ, ದೇಶಭಕ್ತಿಯನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖಂಡ ಪದ್ಮನಾಬ್, ರಾಘವೇಂದ್ರ, ಹರಿ, ಸಿರಿ, ಬೆನಕ ಇತರರು ಉಪಸ್ಥಿತರಿದ್ದರು.