ಚಿತ್ರದುರ್ಗ: ಇದೇ ತಿಂಗಳು 27ರಂದು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿರುವ ಶ್ರೀ ಹಡಪದ ಅಪ್ಪಣ್ಣ ಜಯಂತಿಯನ್ನು ಚಿತ್ರದುರ್ಗ ಜಿಲ್ಲಾ ಸವಿತಾ ಸಮಾಜ ವಿರೋಧ ವ್ಯಕ್ತಪಡಿಸಿದ್ದು, ಜಯಂತಿಯಲ್ಲಿ ಯಾರೂ ಸವಿತಾ ಸಮಾಜದವರು ಪಾಲ್ಗೊಳ್ಳದಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿದ್ದು, ಈ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎನ್.ಚಂದ್ರಶೇಖರ್ ಮಾತನಾಡಿ, ರಾಜ್ಯ ಸವಿತಾ ಸಮಾಜದ ತೀರ್ಮಾನದಂತೆ ಶ್ರೀಹಡಪದ ಅಪ್ಪಣ್ಣ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಲಾಗಿದೆ. ರಾಜ್ಯದ ಇತರೆ ಭಾಗಗಲ್ಲಿಯೂ ಜಯಂತಿಗೆ ಯಾವ ಸವಿತಾ ಬಂಧುಗಳು ಭಾಗವಹಿಸುವುದಿಲ್ಲ. ರಾಜ್ಯ ಸರ್ಕಾರ ಏಕ ಪಕ್ಷೀಯವಾಗಿ ಶ್ರೀಹಡಪದ ಅಪ್ಪಣ್ಣ ಜಯಂತಿ ಆಚರಣೆಯನ್ನು ತೀರ್ಮಾನ ಮಾಡಿದೆ. ಈ ಬಗ್ಗೆ ಕನಿಷ್ಠ ಸೌಜನ್ಯಕ್ಕಾದರೂ ಸಮಾಜವನ್ನು ಮತ್ತು ಮುಖಂಡರನ್ನು ಸರ್ಕಾರ ಸಂಪರ್ಕಿಸಿಲ್ಲವೆಂದು, ದಿ.27ರಂದು ಸವಿತಾ ಬಂಧುಗಳು ಜಿಲ್ಲೆಯ ಯಾವ ತಾಲ್ಲೂಕುಗಳಲ್ಲಿಯೂ ಜಯಂತಿಯಲ್ಲಿ ಭಾಗವಹಿಸದೇ, ಅಂದು ಸವಿತಾ ಜಯಂತಿ ಆಚರಣೆಗೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸವಿತಾ ಸಮಾಜದ ಸಂಚಾಲಕ ಟಿ.ತಿಪ್ಪೇಸ್ವಾಮಿ ಕೂಡಲೇ ಸರ್ಕಾರ ಶ್ರೀ ಸವಿತಾ ಮಹರ್ಷಿಗಳ ಜಯಂತಿಯನ್ನು ಆಚರಣೆಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೇ ಜಿಲ್ಲಾಧ್ಯಂತ ಉಗ್ರ ಹೋರಾಟಗಳನ್ನು ಕೈಗೊಳ್ಳಲಾಗುವುದು ಎಂದು ಟಿ.ತಿಪ್ಪೇಸ್ವಾಮಿ ಸಂಪಿಗೆ ಸಭೆಯಲ್ಲಿ ತಿಳಿಸಿದರು. ಸವಿತಾ ಸಮಾಜದ ಕುಲ ಗುರು ಮಹರ್ಷಿ ಸವಿತಾ ಬಗ್ಗೆ ವೇದ ಉಪನಿಷತ್‍ಗಳಲ್ಲಿಯೂ ಉಲ್ಲೇಖಗಳು ಇವೆ. ಇವರು ಸವಿತಾ ಸಮಾಜದ ಮೂಲ ಪುರಷರು. ಇಂತಹವ ಜಯಂತಿ ಆಚರಣೆಯನ್ನು ಸರ್ಕಾರ ಘೋಷಿಸಬೇಕು ಎಂದು ಜಿಲ್ಲಾ ಪ್ರತಿನಿಧಿ ವಕೀಲ ಜಿ.ಜಿ.ಸಾಯಿನಾಥ್ ಸರ್ಕಾರವನ್ನು ಒತ್ತಾಯಿಸಿದರು.
ಸಭೆಯಲ್ಲಿ ತಾಲ್ಲೂಕು ಪ್ರತಿನಿಧಿ ಘನಶ್ಯಾಂ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಎಸ್.ರಾಜು, ಹಿರಿಯೂರು ಅಧ್ಯಕ್ಷ ಮನೋಹರ್, ಮೊಳಕಾಲ್ಮೂರು ಅಧ್ಯಕ್ಷ ನಾಗರಾಜ್, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಮಾತನಾಡಿದರು. ಜಿಲ್ಲಾ ಪ್ರತಿನಿಧಿ ಭೀಮನಕೆರೆ ನಾಗರಾಜ್, ಕೋಶಾಧ್ಯಕ್ಷ ಹೆಚ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಿವರಾಮ್ ಭಾಗವಹಿಸಿದ್ದರು.