ಚಿತ್ರದುರ್ಗ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಕಾಮನಬಾವಿ ಬಡಾವಣೆಯಲ್ಲಿರುವ ಕಾಳಮ್ಮದೇವಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಗುರುವಾರ ಸ್ವಚ್ಚಗೊಳಿಸಲಾಯಿತು.

ಯೋಜನೆಯ ಮೇಲ್ವಿಚಾರಕ ಜಯರಾಂ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಮಹಿಳಾ ಸಂಘಗಳನ್ನು ರಚಿಸಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ದೇಶದ ಪ್ರಧಾನಿ ನರೇಂದ್ರಮೋದಿರವರು ಸ್ವಚ್ಚಭಾರತಕ್ಕೆ ಮೊದಲ ಆದ್ಯತೆ ನೀಡಿ ಆಂದೋಲನವನ್ನೇ ಆರಂಭಿಸಿದ್ದಾರೆ. ಇದರಿಂದ ಪ್ರತಿಯೊಬ್ಬರು ಮನೆಯನ್ನು ಹೇಗೆ ಸ್ವಚ್ಚವಾಗಿಟ್ಟುಕೊಳ್ಳುತೀರೋ ಅದೇ ರೀತಿಯಲ್ಲಿ ಸುತ್ತಮುತ್ತಲಿನ ಪರಿಸರವನ್ನು ಶುದ್ದವಾಗಿಟ್ಟುಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು.

ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ವಿದ್ಯ ಮಾತನಾಡುತ್ತ ಪ್ರತಿಯೊಬ್ಬರು ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು. ಎಲ್ಲಿ ಶುದ್ದವಾದ ವಾತಾವರಣವಿರುತ್ತದೋ ಅಲ್ಲಿ ಮನಸ್ಸಿಗೆ ಉಲ್ಲಾಸವಿರುತ್ತದೆ ಎಂದು ಹೇಳಿದರು.

ಒಕ್ಕೂಟದ ಪದಾಧಿಕಾರಿ ವೀಣ ಮಾತನಾಡಿ ನಿಮ್ಮ ಮನೆಯ ಕಸವನ್ನು ತಂದು ಬೀದಿಗೆ ಸುರಿಯುವ ಬದಲು ಪ್ರತಿನಿತ್ಯವೂ ಮನೆ ಬಾಗಿಲಿಗೆ ಬರುವ ನಗರಸಭೆ ವಾಹನಗಳಿಗೆ ಕಸವನ್ನು ಹಾಕಿ ಐತಿಹಾಸಿಕ ಚಿತ್ರದುರ್ಗ ನಗರವನ್ನು ಸುಂದರವಾಗಿಟ್ಟುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಿ ಎಂದು ಮನವಿ ಮಾಡಿದರು.
ಮಂಜುಳ, ನಸ್ರಿನ್, ರಂಗಮ್ಮ, ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಗಳಾದ ನಸಿಮ, ಪಲ್ಲವಿ ಸೇರಿದಂತೆ ಸದಸ್ಯರುಗಳು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.