ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಎರಡನೆ ಬಾರಿಗೆ ಆಯ್ಕೆಯಾಗಿರುವ ಅಭಿವೃದ್ದಿಯ ಹರಿಕಾರ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ಅವರ ಅಪಾರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಒತ್ತಾಯಿಸಿದರು.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳನ್ನು ಬಿಜೆಪಿ.ವಶಪಡಿಸಿಕೊಂಡಿರುವ ಇಂದಿನ ಕ್ಲಿಷ್ಠಕರ ಪರಿಸ್ಥಿತಿಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಪಕ್ಷದ ಮರ್ಯಾದೆ ಉಳಿಸಿರುವ ಏಕೈಕ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಐದು ಕಡೆ ಕಾಂಗ್ರೆಸ್ ನೆಲಕಚ್ಚಿರುವ ಈ ಸಂದರ್ಭದಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಗೆದ್ದು ಎರಡನೇ ಬಾರಿಗೆ ಶಾಸಕರಾಗಿರುವ ಟಿ.ರಘುಮೂರ್ತಿರವರು ಚಳ್ಳಕೆರೆ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿರೋಧಿಗಳು ತಲೆದೂಗುವಂತೆ ಅಭಿವೃದ್ದಿಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಬಾರದು. ಹೊರಗಿನವರನ್ನು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ನಾವುಗಳು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಮೈತ್ರಿ ಸರ್ಕಾರ ರಘುಮೂರ್ತಿಗೆ ಸಚಿವ ನೀಡಲೇಬೇಕು. ಇಲ್ಲವಾದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿ.ಪಂ.ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ಸದಸ್ಯ ಜಿ.ಟಿ.ಬಾಬುರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಡಿ.ರಾಜಪ್ಪ, ಗುತ್ತಿಗೆದಾರ ಮೈಲಾರಪ್ಪ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಅಶ್ರಫ್‌ಆಲಿ, ಜಿ.ಪಂ.ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು