ಚಿತ್ರದುರ್ಗ: ಹಿರಿಯನಾಗರಿಕರನ್ನು ಮತ್ತೆ ಖುಷಿಯೆಡೆಗೆ ಕರೆದೊಯ್ಯಲು ಪ್ರತಿ ಭಾನುವಾರವೂ ರಚನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ಶಾಂತಿನಿಕೇತನ ಸಂಸ್ಥೆಯು ಆರಂಭಗೊಂಡು ಈಗ ನೂರು ವಾರ ತುಂಬಿದ ಸಂಭ್ರಮವನ್ನು ಚಿತ್ರದುರ್ಗ ಫೋರ್ಟ್ ರೆಡ್ ಬುಲ್ಸ್ ಸಹಯೋಗದಲ್ಲಿ ಭಾನುವಾರ ಮಧ್ಯಾಹ್ನ ನಗರದ ವಾಸವಿ ಮಹಲ್ ರಸ್ತೆಯ ಕನ್ಯಕಾ ಮಹಲಿನಲ್ಲಿ ಆಚರಿಸಿಕೊಂಡಿತು.

ವಾಸವಿ ವಿದ್ಯಾಸಂಸ್ಥೆಯ ಸಂಸ್ಥೆಯ ಅಧ್ಯಕ್ಷ ಪಿ.ಎಲ್ ಸುರೇಶರಾಜು ಉದ್ಘಾಟಿಸಿ ಅರವತ್ತು ತುಂಬಿದ ಬಳಿಕ ಬದುಕು ಮುಕ್ತಾಯವಾಗುವುದಿಲ್ಲ, ಆರಂಭವಾಗುತ್ತದೆ ಎಂದು ಹೇಳಿದರಲ್ಲದೆ ೧೦೨ ವರ್ಷ ಕ್ರಿಯಾಶೀಲರಾಗಿ ಬದುಕಿದ ಸರ್.ಎಂ ವಿಶ್ವೇಶ್ವರಯ್ಯನವರ ಜೀವನದಿಂದ ಹಿರಿಯ ನಾಗರಿಕರು ಸ್ಫೂರ್ತಿ ಪಡೆಯಬೇಕೆಂದರು. ನೂರು ವಾರಗಳ ಸಂಭ್ರಮದಲ್ಲಿದ್ದ ನೂರಾರು ಹಿರಿಯ ನಾಗರಿಕ ಸದಸ್ಯರು ಬಾಬಾ ಹಾಡುಗಳನ್ನು ಪ್ರಸ್ತುತಪಡಿಸಿದರು. ತಮಗೆ ವಯಸ್ಸಾಗಿದೆ ಎಂಬುದನ್ನು ಮರೆತ ಸದಸ್ಯರು ಕೋಲಾಟ ಆಡಿದರು, ಏಕಪಾತ್ರಾಭಿನಯ ಮಾಡಿದರು, ಹಾಡಿದರು, ಕವನ ವಾಚಿಸಿದರು, ನಗೆ ಹನಿಗಳನ್ನು ಸಿಡಿಸಿದರು, ಚಪ್ಪಾಳೆ ವ್ಯಾಯಾಮದಲ್ಲಿ ಪಾಲುಗೊಂಡರು, ತಮ್ಮ ಅನಿಸಿಕೆಗಳನ್ನು ಹೇಳಿದರು.

ಅಂಧ ಬಾಲಕಿ ಸಹನಾ ಅವರ ಹಾಡುಗಾರಿಕೆ ಎಲ್ಲರ ಮನಸೂರೆಗೊಂಡಿತು. ನಾಗಭೂಷಣ್ ಅವರು ಅಧ್ಯಕ್ಷತೆ ವಹಿಸಿದ್ದರು. ಅಗಲಿದ ಹಿರಿಯ ನಾಗರಿಕ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆಶಾ ಸುದರ್ಶನ್ ಪ್ರಾರ್ಥನೆಯ ನಂತರ ಸಂಸ್ಥೆಯ ಸಂಸ್ಥಾಪಕ ಎ.ಆರ್ ಲಕ್ಷ್ಮಣ್ ಸ್ವಾಗತಿಸಿದರು. ಜ್ಯೋತಿ ಲಕ್ಷ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಯವೈಶ್ಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುತ್ಯಾಲ್ ಪ್ರಾಣೇಶ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.