ಚಿತ್ರದುರ್ಗ : ನಮ್ಮದು ಅತಿಪ್ರಾಚೀನವಾದ ಪರಂಪರೆ. ೧೨ನೇ ಶತಮಾನದಲ್ಲಿ ಎಲ್ಲ ಸಮಾಜದ ಶರಣರು ಅನುಭವ ಮಂಟಪದಲ್ಲಿ ಸೇರಿ ನಾವು ಎಂತಹ ಸಮಾಜವನ್ನು ಕಟ್ಟಬೇಕು ಎಂದು ಚಿಂತನೆ ಮಾಡುತ್ತಿದ್ದರು. ಯಾರೂ ಸುಮ್ಮನೆ ಕುಳಿತು ಉಣ್ಣಬಾರದು ಎಂಬುದು ಅವರ ಧ್ಯೇಯವಾಗಿತ್ತು. ಶರಣರು ಅನ್ನದಾಸೋಹ, ಜ್ಞಾನದಾಸೋಹದ ಜೊತೆಗೆ ಭಕ್ತಿದಾಸೋಹ ಮಾಡುತ್ತ ತ್ರಿವಿಧ ದಾಸೋಹಿಗಳಾಗಿದ್ದರು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಬಸವಕೇಂದ್ರ ಶ್ರೀಮುರುಘಾಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಇಪ್ಪತ್ತೆಂಟನೇ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಅಂದಿನ ಸತಿ-ಪತಿಗಳು ಇಬ್ಬರೂ ಕಾಯಕ ಮಾಡುತ್ತಿದ್ದರು. ಶರಣ ಚಳುವಳಿಯು ಇಂತಹ ಸಮಾಜವನ್ನು ಕಟ್ಟುತ್ತಿತ್ತು. ಕಾಯಕ ಮಾಡುತ್ತ ದಾಸೋಹ ಮಾಡುತ್ತಿದ್ದರು. ಕರೆದುಕೊಂಡು ಉಣ್ಣುವುದು ದಾಸೋಹ ಪದ್ಧತಿ. ಭಕ್ತಿ ದಾಸೋಹ ಎಂದರೆ ಸ್ಪಂದನ ದಾಸೋಹ, ಸಮಾಜ ಸೇವೆಯ ದಾಸೋಹ. ಅದನ್ನು ಸಾಂತ್ವನ ದಾಸೋಹ ಎನ್ನುತ್ತಿದ್ದರು. ಜೀವನದಲ್ಲಿ ಜನರಿಗೆ ಕಷ್ಟ ನಷ್ಟಗಳು ಬರುವುದು ಸಹಜ. ಈ ಕಷ್ಟಗಳು ಎಲ್ಲ ಸಮಾಜ ಸುಧಾರಕರಿಗೆ ದಾರ್ಶನಿಕರಿಗೂ ಬಿಡಲಿಲ್ಲ. ಅವರದು ಸಮ ಸಮಾಜ ಕಟ್ಟುವ ಕಲ್ಪನೆಯಾಗಿತ್ತು. ಅವರು ಆರೋಗ್ಯಪೂರ್ಣವಾದ ಸಮಾಜ ಕಟ್ಟಿಕೊಟ್ಟು ಹೋಗಿದ್ದಾರೆ. ಸಮಾಜಮುಖಿ ಕಾರ್ಯಗಳನ್ನು ಮಾಡುವವರಿಗೆ ನಿಂದೆಗಳು ಸಹಜ ಎಂದು ಹೇಳಿದರು.
ವನಕಲ್ ಮಠದ ಶ್ರೀ ಬಸವ ರಮಾನಂದ ಸ್ವಾಮಿ, ಮುಖ್ಯ ಅತಿಥಿ ಚಿತ್ರದುರ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಜೆ.ಆಂಥೋಣಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಸತೀಶ್‌ಬಾಬು ಮಾತನಾಡಿದರು. ಷಣ್ಮುಖಪ್ಪ ಹನುಮಲಿ, ಕಾರ್‍ಯಕ್ರಮ ದಾಸೋಹಿಗಳಾದ ಎಸ್.ರುದ್ರಮುನಿಯಪ್ಪ, ಡಾ| ಗೀತಾ, ಡಾ| ಪಾಲಾಕ್ಷಯ್ಯ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ೧೬ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶ್ರೀ ಬಸವ ಮಹಾಲಿಂಗ ಸ್ವಾಮಿಗಳು, ಬಸವನಾಗಿದೇವ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ಬಸವಕಿರಣ ಸ್ವಾಮಿಗಳು, ಶ್ರೀ ಪ್ರಜ್ಞಾನಂದ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ, ಕೆಇಬಿ ಷಣ್ಮುಖಪ್ಪ, ಎ.ಜೆ.ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ, ಎನ್.ತಿಪ್ಪಣ್ಣ, ಪಿ.ವೀರೇಂದ್ರಕುಮಾರ್ ಮೊದಲಾದವರಿದ್ದರು.