ಚಿತ್ರದುರ್ಗ: ಇಂಗ್ಲಿಷ್ ಇಲ್ಲದೆ ಜೀವನವೇ ಇಲ್ಲ. ಇಂಜಿನಿಯರ್ ಆಗಿ ವಿದೇಶಕ್ಕೆ ಹೋದರೆ ಸ್ವರ್ಗ ಸಿಕ್ಕಂತೆ ಎನ್ನುವ ಭ್ರಮೆಯಲ್ಲಿ ಕನ್ನಡಿಗರಿರುವ ಇಂದಿನ ಪರಿಸ್ಥಿತಿಯಲ್ಲಿ ಕನ್ನಡದ ಚಳುವಳಿ ಮುಂದೇನು ಎನ್ನುವ ಪ್ರಶ್ನೆ ಈಗ ನಮ್ಮ ಮುಂದಿರುವುದು ನಿಜಕ್ಕೂ ಕನ್ನಡಕ್ಕೆ ಬಂದೊಗಿರುವ ದುಸ್ಥಿತಿ ಎಂದು ಬೆಂಗಳೂರಿನ ಕನ್ನಡ ಕಾರ್ಯಕರ್ತ ರಾ.ನಂ.ಚಂದ್ರಶೇಖರ ಕಳವಳ ವ್ಯಕ್ತಪಡಿಸಿದರು.

ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಇವರುಗಳ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‌ನಲ್ಲಿ ಭಾನುವಾರ ನಡೆದ ೩೮ ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಚಳುವಳಿ ಮುಂದೇನು ಎನ್ನುವ ವಿಷಯ ಕುರಿತು ಮಾತನಾಡಿದರು.
ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಸಂತೋಷವೇ. ಆದರೆ ಕನ್ನಡದಲ್ಲಿ ಶ್ರೇಷ್ಟ ಕಥೆ, ಕಾದಂಬರಿಗಳು ಬರುತ್ತಿಲ್ಲ. ಎಲ್ಲವೂ ಬೇರೆ ಭಾಷೆಗಳ ಅನುವಾದವಾಗುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ರೈಲ್ವೆ, ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವವರೆ ಇಲ್ಲದಂತಾಗಿದ್ದಾರೆ. ಡಿಜಿಟಲ್ ಯುಗದಲ್ಲಿ ಮೊಬೈಲ್, ಇಂಟರ್‌ನೆಟ್ ಹಾವಳಿಯ ನಡುವೆ ಕನ್ನಡ ಪುಸ್ತಕಗಳನ್ನು ಓದುವವರೆ ಇಲ್ಲದಂತಾಗಿದ್ದಾರೆ. ಕನ್ನಡ ಶಾಲೆಗಳಿಗೆ ಕನ್ನಡಿಗರ ಮಕ್ಕಳು ಸೇರುತ್ತಿಲ್ಲ. ಸರ್ಕಾರ ತೆರೆಯುತ್ತಿರುವ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚು ಮಕ್ಕಳು ಸೇರುತ್ತಿದ್ದಾರೆ. ಮುಂದಿನ ಕನ್ನಡ ಚಳುವಳಿ ಯಾರ ಯಾವುದರ ವಿರುದ್ದ ಎನ್ನುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.
ಕನ್ನಡ ಆಳಿದ ವಿರುಪಾಕ್ಷನನ್ನು ಕೇಳುವವರಿಲ್ಲದಂತಾಗಿದೆ. ಅಯ್ಯಪ್ಪ ಬಂದು ಕುಳಿತಿದ್ದಾನೆ. ಚಿದಾನಂದಮೂರ್ತಿ, ಚನ್ನವೀರಕಣವಿ, ಚಂದ್ರಶೇಖರ ಪಾಟೀಲ, ಪಾಟೀಲ ಪುಟ್ಟಪ್ಪ, ವಾಟಾಳ್ ನಾಗರಾಜ್ ಸೇರಿದಂತೆ ಅನೇಕರು ಕನ್ನಡಕ್ಕಾಗಿ ಸಾಕಷ್ಟು ಹೋರಾಡಿದ್ದಾರೆ. ಜಗದೀಶ್‌ರೆಡ್ಡಿ, ಶಂಕರಪ್ಪ, ಮು.ಗೋವಿಂದರಾಜು ಇವರುಗಳು ಕನ್ನಡಕ್ಕಾಗಿ ಚಲಿಸುತ್ತಿದ್ದ ರೈಲಿಗೆ ಅಡ್ಡನಿಂತು ಪ್ರತಿಭಟಿಸಿದಾಗ ಮು.ಗೋವಿಂದರಾಜು ಹುತಾತ್ಮರಾದರು ಎಂದು ನೆನಪಿಸಿಕೊಂಡ ರಾ.ನಂ.ಚಂದ್ರಶೇಖರ ಗೋಕಾಕ್ ಚಳುವಳಿ ಆರಂಭಗೊಂಡಾಗ ಪದ್ಮಭೂಷಣ ಡಾ.ರಾಜ್‌ಕುಮಾರ್ ಕೂಡ ಚಳುವಳಿಗೆ ಇಳಿದು ರಾಜ್ಯಾದ್ಯಂತ ಸಂಚರಿಸಿದಾಗ ಸಾಗರೋಪಾದಿಯಲ್ಲಿ ಜನ ಸೇರಿ ಕನ್ನಡದ ಬಗ್ಗೆ ಜಾಗೃತಗೊಂಡರು. ವಿಪರ್ಯಾಸವೆಂದರೆ ಇಂದಿಗೂ ಕನ್ನಡ ಪ್ರಥಮ ಭಾಷೆ ಆಗಿಲ್ಲ ಎಂದು ನುಡಿದರು.

ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿತ್ರದುರ್ಗ ಇತಿಹಾಸ ಕೂಟದ ಪ್ರೊ.ಲಕ್ಷ್ಮಣ್‌ತೆಲಗಾವಿ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ, ಮೃತ್ಯುಂಜಯಪ್ಪ, ನ್ಯಾಯವಾದಿಗಳಾದ ಹೆಚ್.ಎಂ.ಎಸ್.ನಾಯಕ, ಅಹೋಬಲನಾಯಕ, ಗುರುನಾಥ್, ಮಲ್ಲಿಕಾರ್ಜುನ್ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.