ಚಿತ್ರದುರ್ಗ: ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಕೇವಲ ಉದ್ಯೋಗಕ್ಕಾಗಿ ಮಾತ್ರ ಅಭ್ಯಾಸ ಮಾಡಬಾರದು, ಬದುಕಿಗೆ ಅಗತ್ಯವಿರುವ, ಸಮಾಜದ ಸುತ್ತಮುತ್ತಲಿನ ವೈಜ್ಞಾನಿಕ ವಿಚಾರಗಳನ್ನು ಅರಿತುಕೊಳ್ಳುವ ಸಲುವಾಗಿ ವಿಜ್ಞಾನ ಅವಶ್ಯಕವಾಗಿ ಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ ವಿಜ್ಞಾನಕೇಂದ್ರ, ಸರ್ಕಾರಿ ವಿಜ್ಞಾನ ಕಾಲೇಜು, ಸರಸ್ವತಿ ಕಾನೂನು ಕಾಲೇಜು, ಪಿ.ವಿ.ಎಸ್.ಶಿಕ್ಷಣ ಸಂಸ್ಥೆ, ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆ, ಕಬೀರಾನಂದ ಮಠ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಇನ್ನರ್‍ವೀಲ್ ಕ್ಲಬ್, ವಾಸವಿ ಮಹಿಳಾ ಸಂಘ, ಚಿತ್ರದುರ್ಗ ಇವರ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವಿಜ್ಞಾನ ನಾಯಕತ್ವ ತರಬೇತಿ ಶಿಬಿರ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ವಿಷಯಕ್ಕೆ ಬೇರೆ ದೇಶಗಳಿಗಿಂತ ಭಾರತವು ಹೆಚ್ಚಿನ ಆದ್ಯತೆಯನ್ನು ನೀಡಿದೆ. ವಿಜ್ಞಾನ ವಿಷಯವೆಂಬುದು ವಿಶೇಷವಾದ ಅಧ್ಯಯನ ವಸ್ತುವಾಗಿದ್ದು, ವಿಜ್ಞಾನ ವಿಷಯದಲ್ಲಿ ನಾಯಕತ್ವವನ್ನು ಬೆಳೆಸಿಕೊಂಡು ಹಲವು ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು. ಜಿಲ್ಲೆ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಹಲವು ಕಡೆ ಹೆಚ್ಚಿನ ಮಳೆಯಾಗಿದೆ, ಆದರೆ ನಾವು ಮಳೆಯ ನೀರನ್ನು ಶೇಖರಣೆ ಮಾಡುವುದಿಲ್ಲ, ಮಳೆಯ ನೀರನ್ನು ಶೇಖರಣೆ ಮಾಡಿಕೊಂಡರೆ ಮನೆಯಲ್ಲಿ ಪಾತ್ರೆ, ಬಟ್ಟೆ ಹಾಗೂ ದೈನಂದಿನ ಬಳಕೆಗೆ ಉಪಯೋಗಿಸಬಹುದು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎಲ್ಲರಿಗೂ ಗೊತ್ತಾಗುತ್ತೆ, ಆದರೆ ಮಳೆಗಾಲದಲ್ಲಿ ಜನರು ಸಮಸ್ಯೆ ಮರೆತು ಬಿಡುತ್ತಾರೆ. ಹೀಗಾಗಿ ಮುಂಜಾಗ್ರತೆಯಾಗಿ ನೀರನ್ನು ಸಂರಕ್ಷಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್.ದಿಂಡಲಕೊಪ್ಪ,ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ವಿಜಯ್‍ಕುಮಾರ್, ಖ್ಯಾತ ಮನೋವೈದ್ಯ ಡಾ:ಸಿ.ಆರ್.ಚಂದ್ರಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಾಧಿಕಾರಿ ಜಯಪ್ರಕಾಶ್, ಕೆ.ಕೆ ಕಮಾನಿ, ರಾಜಾನಾಯ್ಕ್ ಹಾಗೂ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು