ಚಿತ್ರದುರ್ಗ: ನಗರದ ವಾಸವಿ ದೇವಾಲಯದಲ್ಲಿ ಮಾರ್ಚ್ 25 ರಿಂದ ಆರಂಭವಾಗಿದ್ದ ರಾಮೋತ್ಸವ ಎಪ್ರಿಲ್ 3 ರ ಮಂಗಳವಾರ ರಾತ್ರಿ ಮುಕ್ತಾಯವಾಯಿತು. ಇಡೀ ದಿನ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಶ್ರೀರಾಮ ತಾರಕ ಯಜ್ಞದ ನಂತರ ಶ್ರೀರಾಮ ಪಟ್ಟಾಭಿಷೇಕ ಜರುಗಿತು. ಪೂರ್ಣಾಹುತಿ ಮಹಾಮಂಗಳಾರತಿ ನಂತರ ಪಾನಕ ಪನಿವಾರ ವಿತರಣೆ ನಡೆಯಿತು.

 

ಸಂಜೆ ಸೀತಾರಾಮ ದೇವರ ವೈಭವಯುತ ಮೆರವಣಿಗೆ ವಾಸವಿ ದೇವಾಲಯದಿಂದ ಹೊರಟು ಎಸ್.ಬಿ.ಎಂ. ಸರ್ಕಲ್ ತಲುಪಿ ಗಾಂಧಿ ಸರ್ಕಲ್ ಮೂಲಕ ಪುನಹ ದೇವಾಲಯ ಸೇರುವುದರೊಂದಿಗೆ ಸಂಪನ್ನವಾಯಿತು. ಈ ಸಂದರ್ಭದಲ್ಲಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ದೇವಾಲಯಕ್ಕೆ ಭೇಟಿ ನೀಡಿ ದೇವತೆಗೆ ಭಕ್ತಿ ಸಮರ್ಪಣೆ ಮಾಡಿದರು. ಚಿತ್ರನಟ ದೊಡ್ಡಣ್ಣ ಸಹ ದೇವಾಲಯಕ್ಕೆ ಆಗಮಿಸಿ ಸಿನೆಮಾ ಡೈಲಾಗ್ ಹೇಳಿ ಜನರನ್ನು ರಂಜಿಸಿದರು.

ಟಿ.ವಿ ಸುರೇಶ ಗುಪ್ತ ಶ್ರೀರಾಮನ ಆದರ್ಶಗಳನ್ನು ಕುರಿತು ಮಾತನಾಡಿದರು. ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್ ಕಾಶಿ ವಿಶ್ವನಾಥ ಶೆಟ್ಟರು ಹೆಚ್ಚು ಹೆಚ್ಚು ಜನರು ದೇವಾಲಯದ ಕಾರ್ಯಕ್ರಮಗಳಲ್ಲಿ ಪಾಲಗೊಳ್ಳಲು ಕೋರಿದರು.
ರಾಮೋತ್ಸವದ ಹತ್ತು ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಾಸವಿ ಭಜನಾ ಮಂಡಲಿ ಹಾಗೂ ಜೈವಾಸವಿ ಮಿತ್ರ ವೃಂದದವರ ಭಜನಾ ಕಾರ್ಯಕ್ರಮ ನಡೆಯಿತು. ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆರ್ಯವೈಶ್ಯ ಜನಾಂಗದವರು ತಮ್ಮ ಅಂಗಡಿ ಮುಂಗಟ್ಟುಗಳಿಗೆ ಮಂಗಳವಾರ ರಜೆ ನೀಡಿ ಈ ಕಾರ್ಯಕ್ರಮದಲ್ಲಿ ಸಪರಿವಾರ ಭಾಗವಹಿಸಿದ್ದು ವಿಶೇಷವಾಗಿತ್ತು.