ಚಿತ್ರದುರ್ಗ: ದಾಂಡೇಲಿ ವಕೀಲರ ಸಂಘದ ಅಧ್ಯಕ್ಷ ಹಿರಿಯ ವಕೀಲ ಅಜಿತ್‍ನಾಯಕರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವುದನ್ನು ವಿರೋಧಿಸಿ ಚಿತ್ರದುರ್ಗದಲ್ಲಿ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಸಂಗಪ್ಪನವರಿಗೆ ಮನವಿ ಸಲ್ಲಿಸಿದರು.

ಕಚೇರಿಯಿಂದ ಕೆಲಸ ಮುಗಿಸಿಕೊಂಡು ವಕೀಲ ಅಜಿತ್‍ನಾಯಕ ಮನೆಗೆ ಹೋಗುವ ಸಂದರ್ಭವನ್ನು ಹೊಂಚು ಹಾಕಿದ ಕೊಲೆಗಡುಕರು ಹಲ್ಲೆ ನಡೆಸಿ ಹತ್ಯೆಗೈದಿರುವುದು ಇಡಿ ನಾಗರೀಕ ಸಮಾವವೇ ತಲ್ಲಣಿಸುವಂತೆ ಮಾಡಿದೆ. ಕಕ್ಷಿದಾರರಿಗೆ ನ್ಯಾಯ ದೊರಕಿಸುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ವಕೀಲರುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಾಗಾಗಿ ವಕೀಲ ಅಜಿತ್‍ನಾಯಕರ ಹತ್ಯೆ ಹಿಂದೆ ಯಾರ್ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾನಿರತ ವಕೀಲರು ಜಿಲ್ಲಾಡಳಿತದ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್.ಬಿ.ವಿಶ್ವನಾಥ್ ಮಾತನಾಡಿ ಕಕ್ಷಿದಾರರ ಪರವಾಗಿ ಕೆಲಸ ಮಾಡುತ್ತಿರುವ ವಕೀಲರುಗಳು ನಿರ್ಭಯವಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ. ಹಲ್ಲೆ ಕೊಲೆ ಬೆದರಿಕೆ ಒತ್ತಡಗಳ ನಡುವೆಯೇ ನ್ಯಾಯಾಲಯದ ಕಾರ್ಯಕಲಾಪಗಗಳಲ್ಲಿ ಭಾಗಿಯಾಗುವಂತೆ ಭಯಾನಕ ಪರಿಸ್ಥಿತಿ ಎದುರಾಗಿದೆ ಎನ್ನುವುದಕ್ಕೆ ವಕೀಲ ಅಜೀತ್‍ನಾಯಕರ ಹತ್ಯೆಯಾಗಿರುವುದೇ ಸಾಕ್ಷಿ. ಇನ್ನು ಮುಂದಾದರೂ ಇಂತಹ ಘಟನೆಗಳು ಮರುಕಳಿಸಬಾರದೆಂದರೆ ವಕೀಲರುಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರಿದರು.

ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ ಕೊಲೆಗೀಡಾಗಿರುವ ವಕೀಲ ಅಜಿತ್‍ನಾಯಕರವರ ಕುಟುಂಬಕ್ಕೆ ರಕ್ಷಣೆ ಒದಗಿಸಿ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶಿವುಯಾದವ್, ಉಪಾಧ್ಯಕ್ಷ ಕೆ.ವೀರಭದ್ರಪ್ಪ, ಜಂಟಿ ಕಾರ್ಯದರ್ಶಿ ಬಿ.ಟಿ.ತಿಪ್ಪೇಸ್ವಾಮಿ, ಖಜಾಂಚಿ ಹೆಚ್.ಎಸ್.ನಿರಂಜನಮೂರ್ತಿ, ಹಿರಿಯ ವಕೀಲರುಗಳಾದ ಕೆ.ಚಂದ್ರಶೇಖರಪ್ಪ, ಬಿ.ಗಿರೀಶ್, ಟಿ.ಜಯಣ್ಣ, ಮೆಹಬೂಬ್‍ಭಾಷ, ಬಿ.ಪ್ರಕಾಶ್, ಕೆ.ಎನ್.ರಮೇಶ್, ಜಿ.ರಮೇಶ್, ಸಿ.ವಿರುಪಾಕ್ಷಪ್ಪ, ಹೆಚ್.ರಮೇಶ್‍ಬಾಬು, ಎಲ್.ತಕ್ಷಶೀಲ, ಆರ್.ಉದಯಶಂಕರ್, ಪ್ರತಾಪ್‍ಜೋಗಿ, ಲೋಕೇಶ್, ವೆಂಕಟೇಶ್, ಮಂಜುಳ, ಸಾವಿತ್ರಿ, ಶ್ವೇತ, ವಾಣಿ, ಮಹಮದ್‍ರಫಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.