ಚಿತ್ರದುರ್ಗ: ಕಕ್ಷಿದಾರರಿಗೆ ನ್ಯಾಯ ದೊರಕಿಸುವಲ್ಲಿ ನಿರತರಾಗಿರುವ ವಕೀಲರ ಆರೋಗ್ಯ ಹದಗೆಟ್ಟಾಗ ವೈದ್ಯಕೀಯ ವೆಚ್ಚ ಸಿಗುವಂತಾಗಬೇಕು. ಅದಕ್ಕಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ವಕೀಲರ ಸಂಘದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜಯಶಾಲಿಯಾಗಿರುವ ಚಳ್ಳಕೆರೆ ತಾಲೂಕು ಮಹದೇವಪುರದ ಎಲ್.ಶ್ರೀನಿವಾಸಬಾಬು ಭರವಸೆ ನೀಡಿದರು.

ಚುನಾವಣೆಯಲ್ಲಿ ಗೆದ್ದ ನಂತರ ಮೊದಲ ಬಾರಿಗೆ ಬುಧವಾರ ನ್ಯಾಯಾಲಯಕ್ಕೆ ಆಗಮಿಸಿದ್ದ ಅವರು ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವೆಲ್ಫೇರ್ ಫಂಡ್ ಮೇಲೆ ವಕೀಲರು ನಿಂತಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿ ವಕೀಲರುಗಳು ಆಸ್ಪತ್ರೆ ಸೇರಿದಾಗ ನೀಡಲಾಗುವ ಒಂದು ಲಕ್ಷ ರೂ.ಯಾವುದಕ್ಕೂ ಸಾಕಾಗುವುದಿಲ್ಲ. ಹೆಚ್ಚಿಗೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಆದ್ದರಿಂದ ವಕೀಲರಿಗೆ ಬೆನಿಫಿಟ್ ಸಿಗುವ ಸ್ಕೀಂಗಳನ್ನು ಜಾರಿಗೆ ತರುವಲ್ಲಿ ಶ್ರಮಿಸುತ್ತೇನೆ. ನ್ಯಾಯಾಲಯದ ಕಟ್ಟಡದಲ್ಲಿಯೇ ವಕೀಲರುಗಳಿಗೆ ಒಂದು ವಾರ್ಡ್ ತೆರೆದು ವೈದ್ಯಾಧಿಕಾರಿಯನ್ನು ನೇಮಿಸಿ ಒಂದು ಅಂಬ್ಯುಲೆನ್ಸ್ ವಾಹನವಿರುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ರಾಜ್ಯದಲ್ಲಿ ಈಗಾಗಲೇ ಏಳೆಂಟು ಬಾರಿ ತಿರುಗಾಡಿದ್ದು, ಎಲ್ಲಾ ರೀತಿಯ ನೆರವು ವಕೀಲರಿಗೆ ಕೊಡಿಸುವಲ್ಲಿ ಬದ್ದನಾಗಿದ್ದೇನೆ ಎಂದರು.

ಏಳು ವರ್ಷಗಳಿಂದಲೂ ರಾಜ್ಯದಲ್ಲಿ ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿರುವುದರಿಂದ ಎರಡನೇ ಬಾರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ೨೪ ನೇ ಸ್ಥಾನದಲ್ಲಿ ಮೊದಲ ಬಾರಿ ಗೆದ್ದಿದ್ದೆ. ಈ ಬಾರಿ ಒಂದನೆ ಸ್ಥಾನದಲ್ಲಿ ಗೆಲ್ಲುತ್ತೇನೆಂಬ ನಿರೀಕ್ಷೆಯಲ್ಲಿದ್ದೆ. ಆದರೆ ಒಂಬತ್ತನೆ ಸ್ಥಾನದಲ್ಲಿ ಗೆಲ್ಲಲ್ಲು ಜಿಲ್ಲೆಯ ಎಲ್ಲಾ ವಕೀಲರುಗಳ ಬೆಂಬಲವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶಿವುಯಾದವ್ ವಕೀಲರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಕ್ಷೇಮಾಭಿವೃದ್ದಿಗೆ ಮೊದಲ ಆದ್ಯತೆ ನೀಡಬೇಕು. ಆಗ್ನೇಯ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರವಿದ್ದಂತೆ ವಿಧಾನಪರಿಷತ್‌ನಲ್ಲಿ ವಕೀಲರುಗಳಿಗೆ ಪ್ರತ್ಯೇಕ ಕ್ಷೇತ್ರ ಮೀಸಲಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಗೆದ್ದಿರುವ ಎಲ್.ಶ್ರೀನಿವಾಸ್‌ಬಾಬುರವರಲ್ಲಿ ಮನವಿ ಮಾಡಿದಾಗ ನಿಮ್ಮ ಎಲ್ಲಾ ಮನವಿಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಾಗ್ದಾನ ಮಾಡಿದರು.

ವಿರುಪಾಕ್ಷಪ್ಪ, ನಿರಂಜನಮೂರ್ತಿ, ಜಯಣ್ಣ, ಗಿರೀಶ್, ಹಿರಿಯ ವಕೀಲರುಗಳಾದ ಮಹೇಶ್ವರಪ್ಪ, ಶಿವಣ್ಣರೆಡ್ಡಿ, ಲೋಕೇಶ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.