ಚಿತ್ರದುರ್ಗ: ಭೋವಿ ಗುರುಪೀಠದ ಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ನೋಟಾಕ್ಕೆ ಮತಚಲಾಯಿಸಿ ಎಂದು ಹೇಳಿರುವುದು ಅಪರಾಧವಲ್ಲ. ದೇಶದ್ರೋಹವೂ ಅಲ್ಲ. ಅದಕ್ಕಾಗಿ ವಿನಾ ಕಾರಣ ಸ್ವಾಮೀಜಿ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರನ್ನು ಹಿಂದಕ್ಕೆ ಪಡೆದು ದೂರು ದಾಖಲಿಸಿರುವವರು ಬೇಷರತ್ತಾಗಿ ಸ್ವಾಮೀಜಿಯವರಲ್ಲಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಅನಂತನಾಯ್ಕ ಎಚ್ಚರಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ.ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಚುನಾವಣಾ ಆಯೋಗ ಇಮ್ಮಡಿಸಿದ್ದರಾಮೇಶ್ವರಸ್ವಾಮೀಜಿಗೆ ನೋಟಿಸ್ ನೀಡಿ ಮಾಹಿತಿ ಪಡೆಯಬಹುದಿತ್ತು. ಇದ್ಯಾವುದನ್ನು ಮಾಡದೆ ಏಕಾಏಕಿ ಚುನಾವಣೆ ಆಯೋಗ ಹಾಗೂ ಪೊಲೀಸರು ಸೇರಿಕೊಂಡು ಸ್ವಾಮೀಜಿ ಮೇಲೆ ದೂರು ದಾಖಲಿಸಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ. ಕೂಡಲೆ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕು. ಇಲ್ಲವಾದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ 99 ಜಾತಿಗಳು ಬೀದಿಗಿಳಿದು ಪೊಲೀಸ್ ಠಾಣೆ ಎದುರು ಹೋರಾಟ ನಡೆಸಿ ನ್ಯಾಯ ಪಡೆಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೋವಿ ಅಭಿವೃದ್ದಿ ನಿಗಮ ಹಾಗೂ ಭೋವಿ ಸಮುದಾಯದ ಅನೇಕ ಸಮಸ್ಯೆಗಳ ಕುರಿತು ಚರ್ಚಿಸಲು ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಿರುವುದನ್ನು ಚುನಾವಣಾ ಆಯೋಗ ಬೇರೆ ರೀತಿಯಲ್ಲಿ ಅರ್ಥಮಾಡಿಕೊಂಡು ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ನೋಟಾಕ್ಕೆ ಮತದಾನ ಮಾಡುವಂತೆ ಪ್ರಚೋಧನಕಾರಿಯಾಗಿ ಕರೆ ನೀಡಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ದ ದೂರು ದಾಖಲಿಸಿರುವುದು ಹಿಂದೆ ಬಿಜೆಪಿ.ಅಭ್ಯರ್ಥಿ ಎ.ನಾರಾಯಣಸ್ವಾಮಿರವರ ಕೈವಾಡವಿದೆ. ಹಾಗಾಗಿ ಇಂತಹ ಅಪಾಯಕಾರಿ ಅಭ್ಯರ್ಥಿಯನ್ನು ಈ ಚುನಾವಣೆಯಲ್ಲಿ ಸೋಲಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಭೋವಿ ಸಮಾಜಕ್ಕೆ ಸ್ಪರ್ಧಿಸಲು ಅವಕಾಶ ನೀಡದೆ ಅನ್ಯಾಯವೆಸಗಿರುವುದು ನಿಜ. ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ.ಅಭ್ಯರ್ಥಿ ಎ.ನಾರಾಯಣಸ್ವಾಮಿ ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿ ಮೇಲೆ ದೂರು ದಾಖಲಿಸಿರುವುದನ್ನು ಹಿಂದಕ್ಕೆ ಪಡೆಯಬೇಕು ಸ್ವಾಮೀಜಿಗಳು ರಾಜಕೀಯ ಮಾತನಾಡಬಾರದೆಂದು ಎಚ್ಚರಿಸುವ ಕಿರುಕುಳ ನೀಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಹಕ್ಕನ್ನು ಕಸಿಯುವ ಕುತಂತ್ರ ಮಾಡುವ ಯಾರ ಆಗಲಿ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಬಿಜೆಪಿ.ಯ ಕೆಲವು ಪುಡಾರಿ ಗುಂಪುಗಳು ಅನಗತ್ಯವಾಗಿ ಕಿರುಕುಳ ನೀಡುವ ಸಾಧ್ಯತೆಗಳಿವೆ. ಸ್ವಾಮೀಜಿಗಳಿಗೆ ರಕ್ಷಣೆ ನೀಡಬೇಕು. ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಎಲ್ಲಾ ಹಟ್ಟಿ, ತಾಂಡ, ಕೇರಿ, ಊರುಗಳಿಗೆ ಹೋಗಿ ಬಿಜೆಪಿ.ವಿರುದ್ದ ಮತಚಲಾಯಿಸುವಂತೆ ಜನತೆಯಲ್ಲಿ ಜಾಗೃತಿ ಮೂಡಿಸಿ ಜಾತಿ ವಿರುದ್ದ ಜಾತಿಯನ್ನು ಎತ್ತಿಕಟ್ಟುವ ಎ.ನಾರಾಯಣಸ್ವಾಮಿ ನಮಗೆ ಬೇಕಿಲ್ಲ. ಕಾಂಗ್ರೆಸ್‍ನ ಚಂದ್ರಪ್ಪನವರನ್ನು ಬೆಂಬಲಿಸುತ್ತೇವೆಂದು ನೇರವಾಗಿ ನುಡಿದರು.

ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿ ಮೇಲೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿರುವವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ಭೋವಿ ಸಮಾಜದ ಸಮಸ್ಯೆ ಹಾಗೂ ಆಧ್ಯಾತ್ಮಿಕ, ಧಾರ್ಮಿಕವಾಗಿ ಚರ್ಚಿಸಲು ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಿರುವುದನ್ನು ಕೆಲವರು ಚುನಾವಣೆಯಲ್ಲಿ ನೋಟಾಕ್ಕೆ ಮತದಾನ ಮಾಡುವಂತೆ ಸ್ವಾಮೀಜಿ ಕರೆ ನೀಡಿದ್ದಾರೆಂದು ವದಂತಿ ಹಬ್ಬಿಸಿರುವುದರಿಂದ ಚುನಾವಣಾ ಆಯೋಗ ಸ್ವಾಮೀಜಿ ಮೇಲೆ ದೂರು ದಾಖಲಿಸಿರುವುದರ ಹಿಂದೆ ಬಿಜೆಪಿ.ಅಭ್ಯರ್ಥಿ ಎ.ನಾರಾಯಣಸ್ವಾಮಿ ಕೈವಾಡವಿದೆ. ಬೆದರಿಕೆ, ಬ್ಲಾಕ್‍ಮೇಲ್‍ಗೆ ಬಗ್ಗುವುದಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸುತ್ತೇವೆ ಎಂದರು.

ನಗರಸಭೆ ಮಾಜಿ ಸದಸ್ಯ ಈ.ಮಂಜುನಾಥ್, ಡಾ.ಮಂಜುನಾಥಸ್ವಾಮಿ, ತಿಪ್ಪೇಸ್ವಾಮಿ, ಲಂಬಾಣಿ ಸಮಾಜದ ಸತೀಶ್‍ನಾಯ್ಕ, ತಾಳಘಟ್ಟ ಹನುಮಂತಪ್ಪ, ಮೋಹನ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.