ಚಿತ್ರದುರ್ಗ: ಸೂರ್ಯ-ಚಂದ್ರನಿಗೆ ಗ್ರಹಣ ಹಿಡಿದರೆ ಬಿಟ್ಟು ಹೋಗುತ್ತದೆ. ಆದರೆ ಮಾನವನ ಬದುಕಿಗೆ ಹಿಡಿದಿರುವ ಗ್ರಹಣ ಬಿಡಿಸುವುದು ಕಷ್ಟ. ಸಮಾಜದಲ್ಲಿರುವ ಅಸಮಾನತೆ, ಅಸ್ಪೃಶ್ಯತೆ ಇವು ಮಾನವ ಬದುಕನ್ನು ಕಾಡುವ ಗ್ರಹಣಗಳಾಗಿವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಮೂವತ್ತನೇ ವರ್ಷದ ಏಳನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಇಂದು ಗುರುಪೂರ್ಣಿಮೆ ಹಾಗು ಚಂದ್ರಗ್ರಹಣ ಬೆಳಗ್ಗೆ ನಡೆಯುತ್ತಿದೆ. ಈ ಅವಧಿಯಲ್ಲಿ ವಿವಾಹ ಮಹೋತ್ಸವ ಮಾಡುತ್ತಿರುವುದು ನಮಗೆ ಎಲ್ಲ ರೀತಿಯಲ್ಲು ಅಮಂಗಲ ಅಲ್ಲ. ಅದು ಶುಭಮಂಗಲ. ಬ್ರಹ್ಮಾಂಡದಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣ ಆಗಾಗ ಸಂಭವಿಸುತ್ತವೆ. ಗ್ರಹಣ ಇದೊಂದು ವಿಸ್ಮಯ. ಸೂರ್ಯ ಮತ್ತು ಚಂದ್ರರು ಗ್ರಹಣದ ಬಗ್ಗೆ ಯೋಚಿಸುವುದಿಲ್ಲ. ಕಿರಣಗಳಿಗೆ ಮಾತ್ರ ಗ್ರಹಣ. ಈ ಗ್ರಹಣ ವಿಮೋಚನೆ ಆಗುತ್ತದೆ. ವ್ಯಕ್ತಿಯ ಜೀವನದಲ್ಲಿ ಶೋಷಣೆ ಎನ್ನುವ ಗ್ರಹಣ. ಅದರಲ್ಲಿ ವೇದನೆ ಮತ್ತು ಯಾತನೆ. ಮಾನವ ದೇವಸ್ಥಾನಕ್ಕೆ ಹೋದರೂ ದೇವರಂತಿರುವುದಿಲ್ಲ ಅಲ್ಲಿಯೂ ಕಿರುಕುಳ ಕೊಡುತ್ತಾನೆ ಎಂದರು.

ಭೂಮಿಯ ಮೇಲೆ ಜನ್ಮ ತಾಳಿದಾಗಿನಿಂದ ಇಂದಿನವರೆಗೂ ಜನಾಂಗೀಯ ತರತಮಗಳಿವೆ. ಬುದ್ಧ, ಬಸವಣ್ಣ, ದಾಸರು, ಗಾಂಧೀಜಿ, ಅಂಬೇಡ್ಕರ್ ಮೊದಲಾದವರು ಸಾಮಾಜಿಕ ಅಸಮಾನತೆಯನ್ನು ದೂರ ಮಾಡಲು ಪ್ರಯತ್ನಿಸಿದ್ದಾರೆ. ಆಧುನಿಕ ಮಾನವನಲ್ಲಿ ಎಲ್ಲಿಲ್ಲದ ಅಸಮಾನತೆ ಕಾಡುತ್ತಿದೆ. ಮೂರ್ಖತನದ ನಡವಳಿಕೆಗಳು, ಅಪ್ರಬುದ್ಧವಾದ ಅಪಕ್ವವಾದ ಚಿಂತನೆಗಳಿಂದ ನಡೆಯುತ್ತಿದೆ. ಭಾರತ ದೇಶ ಶಾಂತಿಪ್ರಧಾನ ದೇಶ. ಆದರೆ ದೇಶದ ಶಾಂತಿಯನ್ನು ಕದಡುವ ಕೆಲಸವನ್ನು ಚೀನಾ ಮಾಡುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರದ ಪ್ರಧಾನಿಗಳು ಗಡಿಭಾಗಕ್ಕೆ ಹೋಗಿ ಸೈನಿಕರಿಗೆ ಧೈರ್ಯ ತುಂಬಿದ್ದಾರೆ. ಇದು ಚೀನಾಕ್ಕೆ ಹಿಡಿದಿರುವ ಗ್ರಹಣ. ಆ ದೇಶ ನಮ್ಮ ಮೇಲೆ ವಿನಾಕಾರಣ ಹಿಂಸಾತ್ಮಕವಾದ ದಾರಿ ತುಳಿದಿದ್ದು ಅದನ್ನು ನಾವೆಲ್ಲ ಖಂಡಿಸಬೇಕೆಂದರು.

ಈ ಸಂದರ್ಭದಲ್ಲಿ ವಿಜಯಕುಮಾರ್ (ವೈಶ್ಯ) ಮತ್ತು ಮೌನಿಕ (ಭೋವಿ) ಅಂತರ್ಜಾತಿ ವಿವಾಹ ಸೇರಿದಂತೆ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮಾಜಿಕ ಅಂತರದೊಂದಿಗೆ ಪ್ರತಿಯೊಬ್ಬರಿಗು ಮಾಸ್ಕ್ ಧರಿಸಿದ್ದರು. ಸ್ವಾನಿಟೈಸರ್ ಹಾಕಿಕೊಳ್ಳಲು ಸೂಚಿಸಲಾಯಿತು. ವಧು-ವರರನ್ನು ಹೊರತುಪಡಿಸಿದರೆ ಕೇವಲ ಮೂವತ್ತು ಜನರು ಭಾಗವಹಿಸಿದ್ದರು. ಕಾನೂನು ಉಲ್ಲಂಘನೆಯಾಗದಂತೆ ಕ್ರಮ ವಹಿಸಲಾಗಿತ್ತು.

ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪ್ರೊ.ಸಿ.ಎಂ. ಚಂದ್ರಪ್ಪ, ಪ್ರೊ. ಜ್ಞಾನಮೂರ್ತಿ, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರಿದ್ದರು.
ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವನಕಲ್ ಮಠದ ಶ್ರೀ ಬಸವ ರಮಾನಂದ ಸ್ವಾಮಿಗಳು ಸ್ವಾಗತಿಸಿದರು. ಬಸವರಾಜ ಶಾಸ್ತ್ರಿ ನಿರೂಪಿಸಿದರು.