ಚಿತ್ರದುರ್ಗ: ಕೋವಿಡ್-19 (ಕೊರೋನಾ ವೈರಸ್) ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ಲಾಕ್‍ಡೌನ್ ಕಫ್ರ್ಯೂ ಆದೇಶ ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೆ 30 ಜನರನ್ನು ಬಂಧಿಸಿದ್ದು, 16 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.  ಅಲ್ಲದೆ ಕಾನೂನು ಉಲ್ಲಂಘಿಸಿದ್ದಕ್ಕಾಗಿ 21 ಎಫ್‍ಐಆರ್ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಿಳಿಸಿದ್ದಾರೆ.

ಕೊರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಏ. 14 ರವರೆಗೆ ಲಾಕ್‍ಡೌನ್ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ಕಫ್ರ್ಯೂ ಜಾರಿಗೊಳಿಸಲಾಗಿದೆ.  ಸಾರ್ವಜನಿಕರು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ಕೊರೋನಾ ವೈರಸ್ ಹರಡದಂತೆ ಮಾಡಲು ಎಲ್ಲ ಸಾರ್ವಜನಿಕರು ಮನೆಗಳಲ್ಲಿಯೇ ಇರಬೇಕು ಅನಗತ್ಯವಾಗಿ ಹೊರಗಡೆ ಅಡ್ಡಾಡುವುದು, ವಾಹನಗಳಲ್ಲಿ ತಿರುಗಾಡುವುದು ಮಾಡುವಂತಿಲ್ಲ ಎಂಬ ಸೂಚನೆಯನ್ನು ನೀಡಿದಾಗ್ಯೂ, ಅಲ್ಲಲ್ಲಿ ಅನಗತ್ಯವಾಗಿ ಒಡಾಡುವುದು, ಸುರಕ್ಷತಾ ವಿಧಾನ ಅನುಸರಿಸದೆ ಕಾನೂನು ಉಲ್ಲಂಘಿಸುವುದು ಕಂಡುಬರುತ್ತಿದೆ.  ಹೀಗಾಗಿ ಜಿಲ್ಲೆಯಲ್ಲಿ ಲಾಕ್‍ಡೌನ್ ಅನ್ನು ಇನ್ನಷ್ಟು ಬಿಗಿ ಕ್ರಮಗಳ ಮೂಲಕ ಜಾರಿಗೊಳಿಸಲು ಈಗಾಗಲೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.  ದಿನನಿತ್ಯದ ಅತ್ಯಾವಶ್ಯಕ ವಸ್ತುಗಳ ಸಾಗಾಣಿಕೆಗೆ ವಿನಾಯಿತಿ ನೀಡಿ, ಚಿತ್ರದುರ್ಗ ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲಾ ಜಿಲ್ಲಾ, ರಾಜ್ಯ ಮತ್ತು ಅಂತರ ರಾಜ್ಯ ಗಡಿಗಳನ್ನು ಮುಚ್ಚುವಂತೆ, ಯಾವುದೇ ವಾಹನಗಳು ಗಡಿಯೊಳಗೆ ಪ್ರವೇಶಿಸಿದಂತೆ ಜಿಲ್ಲೆಯ ಗಡಿ ಭಾಗಗಳು ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.

ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.  ಈ ದಿಸೆಯಲ್ಲಿ ಸಾರ್ವಜನಿಕರು ಆದೇಶವನ್ನು ಚಾಚುತಪ್ಪದೆ ಪಾಲಿಸಬೇಕು.  ಮನೆಗಳಲ್ಲಿಯೇ ಉಳಿಯುವ ಮೂಲಕ, ಕೊರೋನಾ ವೈರಸ್ ಸೋಂಕು ಹರಡದಂತೆ ಕೈಗೊಂಡಿರುವ ಕ್ರಮಗಳಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.