ಚಿತ್ರದುರ್ಗ: ಸಾವಿರಾರು ವರ್ಷಗಳ ಇತಿಹಾಸ ಇರುವ ಆಯುರ್ವೇದ, ಯುನಾನಿ ವೈದ್ಯಪದ್ದತಿಗಳಿಂದ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಯುಷ್ ಎಂದರೆ ಒಂದು ಜೀವನ ಪದ್ದತಿಯಾಗಿದೆ. ಆಯುಷ್ ಪದ್ದತಿಯು ಕಾಯಿಲೆ ಬಾರದಂತೆ ತಡೆಯುವ ವಿಧಾನವಾಗಿದ್ದು, ಪ್ರಾಥಮಿಕ ಹಂತದಲ್ಲಿಯೇ ಕಾಯಿಲೆಗಳು ಬಾರದಂತೆ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಯನ್ನು ತುಂಬುವ ಪ್ರಯತ್ನ ಇದಾಗಿದೆ ಜಿಲ್ಲಾ ಎಂದು ಆಯುಷ್ ಅಧಿಕಾರಿ ಡಾ.ಕೆ.ಎಲ್.ವಿಶ್ವನಾಥ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಆಯುಷ್ ರೋಗ ನಿರೋಧಕ ಶಕ್ತಿವರ್ಧಕ ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದಾಗ ಮಾತ್ರ ವೈರಾಣುಗಳು ಬಾಧಿಸುತ್ತವೆ. ಹಾಗಾಗಿ ದೈನಂದಿನ ಆಹಾರ-ವಿಹಾರ ಪದ್ಧತಿ ಜೊತೆಗೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಬ್ಯಾಕ್ಟೀರಿಯಾ, ವೈರಸ್ ಸೇರಿದಂತೆ ಯಾವುದೇ ವೈರಾಣುಗಳು ದೇಹವನ್ನು ಬಾಧಿಸುವುದಿಲ್ಲ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಕೆ.ಎಲ್.ವಿಶ್ವನಾಥ್ ಸಲಹೆ ನೀಡಿದರು.

ದೈನಂದಿನ ಚಟುವಟಿಕೆಗಳಾದ ಯೋಗ, ವ್ಯಾಯಾಮ ಜೊತೆಗೆ ಉತ್ತಮ ಜೀವನ ಶೈಲಿಯಲ್ಲಿ ಪೌಷ್ಠಿಕ ಆಹಾರ ಪದ್ಧತಿ ಅಳವಡಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.  ಕೋವಿಡ್-19 ಸೋಂಕಿತರು ಹೆಚ್ಚು ಗುಣಮುಖವಾಗುತ್ತಿರುವುದು ತಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯಿಂದ ಮಾತ್ರವೇ ಹೊರತು ಯಾವುದೇ ಔಷಧಿಗಳಿಂದಲ್ಲ ಎಂದು ಹೇಳಿದರು.

ಕೋವಿಡ್-19 ಸೋಂಕು ಸಮುದಾಯಕ್ಕೆ ಹರಡುತ್ತಿರುವುದು ತುಂಬಾ ಆತಂಕಕಾರಿ ವಿಚಾರವಾಗಿದೆ. ಸಮುದಾಯಕ್ಕೆ ಸೋಂಕು ಹರಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ಹಾಗಾಗಿ ಸಾರ್ವಜನಿಕರ ಸಂಪರ್ಕದಲ್ಲಿರುವ ಕೊರೋನಾ ವಾರಿಯರ್ಸ್‍ಗಳಾದ ವೈದ್ಯರು, ಪೊಲೀಸ್ ಸಿಬ್ಬಂದಿ, ಪತ್ರಕರ್ತರು ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಿಕೊಳ್ಳಬೇಕಿದೆ. ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದರಿಂದ ಕೊರೋನಾದಂತಹ ವೈರಸ್‍ಗಳು ಮುಂದಿನ ದಿನಗಳಲ್ಲಿ ಬಂದರೂ ಸಹ ಇದರಿಂದ ನಾವು ರಕ್ಷಣೆ ಪಡೆಯಲು, ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಳ ಮಾಡಿಕೊಳ್ಳಬೇಕು ಎಂದು ಡಾ. ವಿಶ್ವನಾಥ್ ಸಲಹೆ ನೀಡಿದರು.

ಆಯುರ್ವೇದ ವೈದ್ಯ ಡಾ.ಶಿವಕುಮಾರ್ ಮಾತನಾಡಿ, ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಹಾಗೂ ವ್ಯಕ್ತಿಗತ ಅಂತರ ಕಾಪಾಡಿಕೊಂಡರೆ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ. ಸದ್ಯಕ್ಕೆ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಯಾವುದೇ ಮದ್ದು ಇಲ್ಲ. ಹಾಗಾಗಿ ಕೊರೊನಾ ನಿಯಂತ್ರಿಸಲು ಮಾಸ್ಕ್ ಹಾಗೂ ವ್ಯಕ್ತಿಗತ ಅಂತರ ನಮ್ಮ ಬಳಿ ಇರುವ ಅಸ್ತ್ರ.  ಜನದಟ್ಟಣೆ ಇರುವ ಕಡೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾರ್ವಜನಿಕರು ಬಟ್ಟೆ ಮಾಸ್ಕ್ ಧರಿಸುವುದು ಸೂಕ್ತ. ಹೊರಗಡೆ ಅನಾವಶ್ಯಕವಾಗಿ ಏನನ್ನು ಮುಟ್ಟಬಾರದು. ಮುಂಜಾಗ್ರತಾ ಕ್ರಮದಿಂದ ಕೊರೊನಾ ವೈರಸ್‍ನ್ನು ತಡೆಗಟ್ಟಬಹುದು. ವೈಯಕ್ತಿಕ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕು. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಯಾವುದೇ ರೀತಿಯ ವೈರಸ್‍ಗಳಿಗೆ ಹೆದರುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಧನಂಜಯಪ್ಪ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.  ಪತ್ರಕರ್ತರಿಗೆ ರೋಗ ನಿರೋಧಕ ಶಕ್ತಿವರ್ಧಕ ಔಷಧಿಯನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.