ಚಿತ್ರದುರ್ಗ; ತೋಟಗಾರಿಕೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯ ರೈತ ಮಹಿಳೆಯರಿಗೆ ಆಯಾ ತಾಲ್ಲೂಕು ಮಟ್ಟದಲ್ಲಿ ತರಬೇತಿ ನೀಡುವ ಕಾರ್ಯಕ್ರಮ ಫೆ. 24 ರಿಂದ ಆರಂಭವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಅವರು ತಿಳಿಸಿದ್ದಾರೆ.

ಇಲಾಖೆ ವತಿಯಿಂದ ತೋಟಗಾರಿಕೆ ತರಬೇತಿ ನೀಡುವ ಯೋಜನೆಯಡಿ ಈ ಬಾರಿ ಫೆಬ್ರವರಿ 24, 25 ಹಾಗೂ 26 ರಂದು ಆಯಾ ತಾಲ್ಲೂಕುಗಳಲ್ಲಿ ರೈತ ಮಹಿಳೆಯರಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ಚಿತ್ರಹಳ್ಳಿಯಲ್ಲಿರುವ ನರ್ಸರಿ ಫಾರಂನ್ನು ಕುರಿ ಮತ್ತು ಮೇಕೆ ಸಾಕಾಣಿಕೆ ಮಾದರಿ ಕ್ಷೇತ್ರವನ್ನಾಗಿಸಲು ಉದ್ದೇಶಿಸಲಾಗಿದೆ.

ತೋಟಗಾರಿಕೆ ಇಲಾಖೆಯು ತೆಂಗು ಬೀಜ ಸಂಗ್ರಹಣೆ ಮತ್ತು ನರ್ಸರಿ ನಿರ್ವಹಣೆ ಯೋಜನೆಯಡಿ 73050 ಹೆಕ್ಟೇರ್ ಪ್ರದೇಶ ನಿರ್ವಹಣೆಯ ಉದ್ದೇಶ ಹೊಂದಿದ್ದು, ಕಳೆದ ಏಪ್ರಿಲ್‍ನಿಂದ ಇಲ್ಲಿಯವರೆಗೆ 63070 ಹೆಕ್ಟೇರ್ ಭೂ ಪ್ರದೇಶದಲ್ಲಿ ಈ ಯೋಜನೆಗಾಗಿ 13.50 ಲಕ್ಷ ರೂ. ವಿನಿಯೋಗಿಸಲಾಗಿದೆ.

ಹನಿನೀರಾವರಿಗಾಗಿ ಕೇಂದ್ರವಲಯ ಯೋಜನೆಯಡಿ 120 ಹೆಕ್ಟೇರ್ ಭೂ ಪ್ರದೇಶದಲ್ಲಿ ಸೌಲಭ್ಯ ಕಲ್ಪಿಸಲು 60 ಲಕ್ಷ ರೂ. ವೆಚ್ಚ ಮಾಡಿ, ಶೇ. 100 ರಷ್ಟು ಸಾಧನೆ ಮಾಡಲಾಗಿದೆ.   ಜಿಲ್ಲೆಯ 04 ಕೃಷಿ ಕ್ಷೇತ್ರ ಮತ್ತು ಸಸ್ಯವಾಟಿಕೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 20 ಲಕ್ಷ ರೂ ವೆಚ್ಚ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)