ಚಿತ್ರದುರ್ಗ: ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಭೂಸುಧಾರಣಾ ಕಾಯಿದೆ ಹಾಗೂ ಎ.ಪಿ.ಎಂ.ಸಿ.ಕಾಯಿದೆ ತಿದ್ದುಪಡಿಯನ್ನು ಕೂಡಲೆ ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದು ರೈತರು ಮತ್ತು ಕಾರ್ಮಿಕರ ಪರವಾಗಿರುವ ಕಾನೂನುಗಳನ್ನು ಜಾರಿಗೆ ತರಬೇಕು. ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ತೀವ್ರ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಸುತ್ತಾಡಿ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿರುವ ರಾಜ್ಯ ಮತ್ತು ಕೇಂದ್ರ ಬಿಜೆಪಿ.ಸರ್ಕಾರ ಕೊರೋನಾ ನಿಯಂತ್ರಣ ನೆಪದಲ್ಲಿ ವೈದ್ಯಕೀಯ ಪರಿಕರಗಳ ಖರೀಧಿಯಲ್ಲಿ ಕೋಟ್ಯಾಂತರ ರೂ.ಗಳ ಹಗರಣ ನಡೆಸಿರುವುದನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಕೊರೋನಾದಿಂದ ಇಡಿ ವಿಶ್ವವೇ ತಲ್ಲಣಿಸಿದೆ. ದೇಶದ ಪ್ರಧಾನಿ ಪೂರ್ವಾಪರ ಯೋಚಿಸದೆ ಏಕಾಏಕಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ದಿನ ನಿತ್ಯವೂ ದುಡಿದು ತಿನ್ನುವ ಬಡವರು ಸಂಕಷ್ಟಕ್ಕೆ ಸಿಲುಕಿದರು. ಉದ್ಯೋಗ ಹುಡುಕಿಕೊಂಡು ನಮ್ಮ ರಾಜ್ಯದಿಂದ ಬೇರೆ ಕಡೆ ವಲಸೆ ಹೋದವರು. ಬೇರೆ ರಾಜ್ಯಗಳಿಂದ ನಮ್ಮಲ್ಲಿಗೆ ಬಂದ ಕೂಲಿ ಕಾರ್ಮಿಕರು ಒಪ್ಪತ್ತಿನ ಊಟಕ್ಕೂ ಇಲ್ಲದೆ ಪರದಾಡಿದರು. ಅನೇಕರು ನೂರಾರು ಕಿ.ಮೀ.ನಡೆದು ಪ್ರಾಣಬಿಟ್ಟ ಉದಾಹರಣೆಗಳು ಸಾಕಷ್ಟಿದೆ ಎಂದು ಕೋಮುವಾದಿ ಬಿಜೆಪಿ.ವಿರುದ್ದ ಕಾಂಗ್ರೆಸ್‌ನವರು ಕಿಡಿಕಾರಿದರು.

ತಮಿಳುನಾಡು ಮತ್ತು ತೆಲಂಗಾಣ ಸರ್ಕಾರಗಳು ನಾಲ್ಕು ಲಕ್ಷ ರೂ.ಗೆ ಒಂದರಂತೆ ವೆಂಟಿಲೇಟರ್ಸ್‌ಗಳನ್ನು ಖರೀಧಿಸಿದರೆ ರಾಜ್ಯ ಸರ್ಕಾರ ೫.೬ ಲಕ್ಷದಿಂದ ೧೮.೮ ಲಕ್ಷ ರೂ.ಗೆ ಒಂದರಂತೆ ವೆಂಟಿಲೇಟರ್ಸ್‌ಗಳನ್ನು ಖರಿಧೀಸಿ ಬ್ರಹ್ಮಾಂಡ ಭ್ರಷ್ಟಾಚಾರವೆಸಗಿದೆ. ಸ್ಯಾನಿಟೈಸರ್, ಪಿ.ಪಿ.ಕಿಟ್, ಥರ್ಮಲ್ ಸ್ಕ್ಯಾನಿಂಗ್, ಆಕ್ಸಿಜನ್ ಸಿಲಿಂಡರ್, ಮಾಸ್ಕ್‌ಗಳಲ್ಲಿಯೂ ಅಕ್ರಮವೆಸಗಿರುವ ಬಿಜೆಪಿ.ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇಷ್ಟು ಸಾಲದೆಂಬಂತೆ ಭೂಸುಧಾರಣೆ ಕಾಯಿದೆ ಹಾಗೂ ಎ.ಪಿ.ಎಂ.ಸಿ.ಕಾಯಿದೆ ತಿದ್ದುಪಡಿಗೊಳಿಸಿ ಅನ್ನದಾತ ರೈತನ ಬೆನ್ನುಮೂಳೆ ಮುರಿಯಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೆ ಕಾಯಿದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಎಚ್ಚರಿಸಿದರು.

ಲಾಕ್‌ಡೌನ್ ಸಂದರ್ಭದಲ್ಲಿ ೮೩ ಲಕ್ಷ ಜನರಿಗೆ ಫುಡ್‌ಕಿಟ್‌ಗಳನ್ನು ವಿತರಿಸಿದ್ದೇವೆಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಯಾರಿಗೆ ಎಲ್ಲಿ ಎಷ್ಟು ನೀಡಿದ್ದೇವೆಂಬ ವಿವರ ಒದಗಿಸಿಲ್ಲ. ಮಾರುಕಟ್ಟೆಯಲ್ಲಿರುವ ದರಕ್ಕಿಂತ ದುಪ್ಪಟ್ಟು ದರ ನೀಡಿ ವೈದ್ಯಕೀಯ ಸಲಕರಣೆಗಳನ್ನು ಖರೀಧಿಸಿರುವ ಸರ್ಕಾರ ಸಾಮಾಗ್ರಿಗಳು ಸರಬರಾಜಾಗದೆ ಹಣ ಪಾವತಿಸಿರುವ ಬಗ್ಗೆ ಮಾಹಿತಿ ದೊರಕಿದೆ. ಅಂದಾಜು ಎರಡು ಸಾವಿರ ಕೋಟಿ ರೂ.ಗಳನ್ನು ಹೆಚ್ಚಿಗೆ ಪಾವತಿಸಿದ್ದು, ಒಟ್ಟಾರೆ ಹಗರಣವನ್ನು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರನ್ನು ಕೋರಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಉಪಾಧ್ಯಕ್ಷ ಅಜ್ಜಪ್ಪ, ನಜ್ಮತಾಜ್, ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಸಂಪತ್, ಬಿ.ಜಿ.ಶ್ರೀನಿವಾಸ್, ಸೈಯದ್ ಅಲ್ಲಾಭಕ್ಷಿ, ಕೆ.ಪಾಪಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಬಿ.ಟಿ.ಜಗದೀಶ್, ಕೆ.ಪಿ.ಸಿ.ಸಿ.ಕೋಆರ್ಡಿನೇಟರ್,ವಿಜಯಕುಮಾರ್, ಜಿ.ಪಂ.ಅಧ್ಯಕ್ಷೆ ಶಶಿಕಲ ಸುರೇಶ್‌ಬಾಬು, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜ, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮಬಾಲರಾಜ್, ಒ.ಬಿ.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಹಸನ್‌ತಾಹೀರ್, ಸೈಯದ್‌ಖುದ್ದೂಸ್, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಮುನಿರಾ ಎ.ಮಕಾಂದಾರ್, ಡಿ.ರಾಜಪ್ಪ, ಮುದಸಿರ್ ನವಾಜ್, ಮನೋಹರ್, ಕುಮಾರ್‌ಗೌಡ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.