ಚಿತ್ರದುರ್ಗ: ಆಹಾರ ಉತ್ಪಾದನೆಗೆ ರೈತರಿಂದ ನೇರವಾಗಿ ಮೆಕ್ಕೆಜೋಳವನ್ನು ಖರೀದಿಸಲು ಸರ್ಕಾರ ತೀರ್ಮಾನಿಸಿದ್ದು,  ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತ ಇವರು ಹಾಲು ಉತ್ಪಾದಕ ಸಹಕಾರ ಸಂಘಗಳ ಮೂಲಕ ಮೆಕ್ಕೆಜೋಳ ಖರೀದಿ ಮಾಡಲು ಕ್ಷೀರಸಿರಿ ತಂತ್ರಾಂಶದ ಐ.ಡಿ ಮತ್ತು ಫ್ರೂಟ್ಸ್ ತಂತ್ರಾಂಶ ಬಳಕೆ ಮಾಡಿ ರೈತರು ನೋಂದಾಯಿಸಿಕೊಳ್ಳಬೇಕು ಎಂದು ಜಂಟಿಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಮೆಕ್ಕೆಜೋಳ ಮಾದರಿಯನ್ನು ಶುದ್ಧವಾದ ಪಾರದರ್ಶಕ ಬ್ಯಾಗ್‍ನಲ್ಲಿ ಪ್ಯಾಕಿಂಗ್ (1 ಕೆ.ಜಿ) ಮಾಡಿ, ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿಗೆ ನೋಂದಣಿ ಸಂಖ್ಯೆ ಜೊತೆ ನೀಡಬೇಕು.

ರೈತರು, ನಿಗದಿಪಡಿಸಿದ ದಿನ ಮತ್ತು ಸಮಯಕ್ಕೆ ಒಪ್ಪಿದ ಪ್ರಮಾಣದಲ್ಲಿ ಗುಣಮಟ್ಟದ ಮೆಕ್ಕೆಜೋಳವನ್ನು ಎಸ್.ಎಂ.ಎಸ್ ಮಾಹಿತಿಯಂತೆ ತರಬೇಕಾಗಿರುತ್ತದೆ. ಒಬ್ಬ ರೈತ ಪ್ರತಿ ಎಕರೆಗೆ ಗರಿಷ್ಠ 20 ಕ್ವಿಂಟಾಲ್‍ಗೆ ಮೀರದಂತೆ ಹಾಗೂ ಪ್ರತಿ ರೈತರಿಗೆ ಗರಿಷ್ಠ 5 ಎಕರೆಗೆ 50 ಕ್ವಿಂಟಾಲ್‍ಗೆ ಮೀರದಂತೆ ಮೆಕ್ಕೆಜೋಳ ಸರಬರಾಜಿಗೆ ಸೀಮಿತಗೊಳಿಸಲಾಗಿದೆ. ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ. ಒದಗಿಸಿರುವ ಅವಕಾಶವನ್ನು ಉಪಯೋಗಿಸಿಕೊಂಡು ರೈತರೇ ನೇರವಾಗಿ ಸರಬರಾಜು ಮಾಡಬೇಕು. ಸರ್ಕಾರ ನಿಗದಿಪಡಿಸಿರುವ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳದ ನಿವ್ಹಳ ತೂಕದ ಬೆಲೆ ರೂ. 1760/-ಗಳಿರುತ್ತದೆ.

ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ರೈತರು 2000 ಮೆ.ಟನ್ ಮೆಕ್ಕೆಜೋಳವನ್ನು ಕರ್ನಾಟಕ ಹಾಲು ಮಂಡಳಿ ನಿಗದಿಪಡಿಸಿರುವ ಗುಬ್ಬಿ ಪಶು ಆಹಾರ ಘಟಕಕ್ಕೆ ಮೆಕ್ಕೆಜೋಳವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಗೋಣಿಚೀಲದಲ್ಲಿ ಸರಬರಾಜು ಮಾಡಬೇಕು. ಮೆಕ್ಕೆಜೋಳವನ್ನು ಉತ್ತಮ ಸ್ಥಿತಿಯಲ್ಲಿರುವ 50 ಕೆ.ಜಿ ಸಾಮಥ್ರ್ಯದ ಗೋಣಿಚೀಲದಲ್ಲಿ ಸರಬರಾಜು ಮಾಡಬೇಕು. ಪ್ಲಾಸ್ಟಿಕ್ ಚೀಲದಲ್ಲಿ ತರುವಂತಿಲ್ಲ. ಗೋಣಿಚೀಲದ ಹಣ ನೀಡಲಾಗುವುದಿಲ್ಲ. ಮೆಕ್ಕೆಜೋಳದ ಚೀಲದ ಮೇಲೆ ಮತ್ತು ಚೀಲದೊಳಗೆ ಕೀಟಾಣು ಮುಕ್ತವಾಗಿರಬೇಕು. ಸರಬರಾಜಾದ ಮತ್ತು ಮಾದರಿ ಮೆಕ್ಕೆಜೋಳದಲ್ಲಿ ಗುಣಮಟ್ಟದ ವ್ಯತ್ಯಾಸ ಕಂಡುಬಂದು ತಿರಸ್ಕøತಗೊಂಡಲ್ಲಿ ಅದನ್ನು ಕಾರ್ಖಾನೆಯಿಂದ ಸಾಗಾಣಿಕೆ ಮಾಡುವ ಜವಾಬ್ದಾರಿ ಕೂಡ ರೈತರದ್ದಾಗಿರುತ್ತದೆ. ಮಾದರಿ ಅಂಗೀಕೃತಗೊಂಡಲ್ಲಿ ಘಟಕದಿಂದ ನಿಗದಿಪಡಿಸಿದ ದಿನಾಂಕದಂದೇ (ಸಂಜೆ 4 ಗಂಟೆ ಒಳಗೆ) ಖುದ್ದಾಗಿ ಮೆಕ್ಕೆಜೋಳವನ್ನು ಸುಸ್ಥಿತಿಯಲ್ಲಿ ಸರಬರಾಜು ಮಾಡಬೇಕಾಗುತ್ತದೆ.

ರೈತರು ಸರಬರಾಜು ಮಾಡಿದ ಮೆಕ್ಕೆಜೋಳದ ಪ್ರಮಾಣಕ್ಕೆ ಸರಬರಾಜು ಮಾಡಿದ ಗರಿಷ್ಠ 20 ದಿನಗಳೊಳಗೆ ಸರ್ಕಾರದ ಡಿಬಿಟಿ ಪೋರ್ಟಲ್ ಮುಖಾಂತರ ಹಣ ಪಾವತಿಗೆ ಕ್ರಮ ವಹಿಸಲಾಗುತ್ತದೆ. ಮೆಕ್ಕೆಜೋಳ ಮಾರಾಟ ಮಾಡಲು ಇಚ್ಚಿಸುವ ರೈತರು, ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಆಗಿರದಿದ್ದಲ್ಲಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬೇಕು.

ಮೆಕ್ಕೆಜೋಳವು ಸರ್ಕಾರ, ಕರ್ನಾಟಕ ಹಾಲು ಮಂಡಳಿ ನಿಗದಿಪಡಿಸಿದ ಕನಿಷ್ಟ ಗುಣಮಟ್ಟದ ವಿವರ ಇಂತಿದೆ. ಇತರೆ ವಸ್ತುಗಳ ಗರಿಷ್ಠ ಮಿತಿ ಶೇ. 1.0, ಇತರೆ ಧಾನ್ಯದ ಕಾಳುಗಳು 2.0, ಪೂರ್ಣ ಪ್ರಮಾಣದಲ್ಲಿ ಬಲಿಯದ ಸಂಕುಚಿತ ಕಾಳುಗಳು ಶೇ. 3.0, ಹಾನಿಗೊಂಡ ಕಾಳುಗಳು ಶೇ. 1.50, ಭಾಗಶಃ ಹಾನಿಗೊಳಗಾದ ಬಣ್ಣ ಬದಲಿಸಿದ ಕಾಳುಗಳು ಶೇ.4.50, ಹುಳಕೊರೆದ ಕಾಳುಗಳು ಶೇ. 1.0, ತೇವಾಂಶ 14.0 ಗರಿಷ್ಠ ಮಿತಿ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಡಾ. ಎಮ್.ಎಚ್ ರಾಜಪ್ಪ, ಮೊ : 7760980563, ಉಸ್ತುವಾರಿ ವ್ಯವಸ್ಥಾಪಕರು, ಹಾಲು ಉತ್ಪಾದಕರ ಸಂಘ ಚಿತ್ರದುರ್ಗ ಇವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.