ಚಿತ್ರದುರ್ಗ:ರಾಜ್ಯ ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆ. ಮಂಜುನಾಥ್ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಜಗದೀಶ್ ಗೌಡಪ್ಪ ಪಾಟೀಲ ತಿಳಿಸಿದ್ದಾರೆ.

   ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಜಿ.ಜಗದೀಶ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮೇ 30 ರಂದು ಉಪ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ 57 ಮತದಾರರು ಇದ್ದರು. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳು ಸ್ಪರ್ದಿಸಿದ್ದರು. ಇದರಲ್ಲಿ ಕೆ. ಮಂಜುನಾಥ್ ಅವರು 40 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಎಸ್.ಕೆ. ಮಂಜುನಾಥ್ ಅವರು 17 ಮತಗಳು ಪಡೆದರು.

      ಚುನಾವಣೆ ಫಲಿತಾಂಶ ಘೋಷಣೆ ಬಳಿಕ, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎ. ಷಡಾಕ್ಷರಿ ಮಾತನಾಡಿ, ಜಿಲ್ಲಾ ಘಟಕದ ಅಧ್ಯಕ್ಷರ ಅವಧಿ ಐದು ವರ್ಷಗಳಾಗಿದ್ದು, ಈಗಾಗಲೇ 8 ತಿಂಗಳು ಕಳೆದಿದೆ. ಉಳಿದ ಅವಧಿಗೆ ಉತ್ಸಾಹಿ ಯುವ ಸರ್ಕಾರಿ ನೌಕರ ಕೆ. ಮಂಜುನಾಥ್ ಅವರು ಆಯ್ಕೆಯಾಗಿದ್ದು, ಜಿಲ್ಲೆಯ ನೌಕರರ ಹಿತ ಕಾಪಾಡಲಿದ್ದಾರೆ. ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೇಂದ್ರ ಸಂಘದ ಗಮನಕ್ಕೆ ತಂದು ಮಾಡಿಕೊಡುವ ಪ್ರಯತ್ನಗಳು ಅವರಿಂದ ಆಗಲಿ ಎಂದು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.

   ಕೋವಿಡ್-19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಿ ನೌಕರರು ಒಂದು ದಿನದ ವೇತನ ಸುಮಾರು ರೂ. 200 ಕೋಟಿ ನೀಡಿದ್ದಾರೆ. ಪ್ರತಿ ವರ್ಷ ರಾಜ್ಯ ಸರ್ಕಾರಿ ನೌಕರರಿಗಾಗಿ 15 ದಿನಗಳ ಗಳಿಕೆ ರಜೆ ನಗದೀಕರಣಕ್ಕೆ ಅವಕಾಶವಿದೆ. ಇದು ಸುಮಾರು ರೂ 400 ರಿಂದ 500 ಕೋಟಿ ರೂ. ಆಗಲಿದೆ. ಆದರೆ ಈ ಬಾರಿ ಸೌಲಭ್ಯ ನೀಡಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.  ಇದರಿಂದ ನೌಕರರಿಗೆ ತೊಂದರೆ ಆಗಿದ್ದರೂ ರಾಷ್ಟ್ರೀಯ ವಿಪತ್ತು ಸಂದರ್ಭದಲ್ಲಿ ಮಾನವೀಯತೆ ಮೆರೆಯುವ ಉದ್ದೇಶದಿಂದ ಅತ್ಯಂತ ಗೌರವಯುತವಾಗಿ ನಿರ್ಧಾರ ಸ್ವೀಕರಿಸಿ, ಸರ್ಕಾರದ ಜೊತೆ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

  ಆರೋಗ್ಯ ಇಲಾಖೆ, ಪೌರಾಡಳಿತ ಇಲಾಖೆ, ಕಂದಾಯ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಶಿಕ್ಷಣ ಇಲಾಖೆಯ ನೌಕರರು ಸೇರಿದಂತೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಎಲ್ಲ ನೌಕರರು ಹಾಗೂ ಇತರೆ ಇಲಾಖೆ ನೌಕರರೆಲ್ಲರೂ ಕೋವಿಡ್-19 ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

   ಕೇರಳ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ ರಾಜ್ಯಗಳಿಗೆ ಹೋಲಿಸಿದಾಗ ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದೆ. ಇದರ ಶ್ರೇಯಸ್ಸು ರಾಜ್ಯ ಸರ್ಕಾರಿ ನೌಕರರಿಗೆ ಸಲ್ಲಬೇಕು. ವೃತ್ತಿ ಬದುಕಿನ ಸೇವೆಗಳನ್ನು ನೀಡುವುದರ ಜೊತೆಗೆ ಸರ್ಕಾರಕ್ಕೆ ಆರ್ಥಿಕ ಸಹಕಾರಗಳನ್ನು ಕೊಡುವುದರ ಜೊತೆಗೆ ಅತ್ಯಂತ ಗೌರವದಿಂದ ನೌಕರರು ನಡೆದುಕೊಳ್ಳುತ್ತಿದ್ದಾರೆ. ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು  ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎ. ಷಡಾಕ್ಷರಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಶ್ರೀನಿವಾಸ್, ಗೌರವಾಧ್ಯಕ್ಷ ಶಿವರುದ್ರಯ್ಯ, ಉಪಾಧ್ಯಕ್ಷ ಬಸವರಾಜ್, ಬೆಂಗಳೂರು ವಿಭಾಗದ ಉಪಾಧ್ಯಕ್ಷ ಮೋಹನ್ ಕುಮಾರ್, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಜಯಪ್ಪ,  ಜಿಲ್ಲಾ ಶಾಖೆಯ ಪ್ರಭಾರಿ ಅಧ್ಯಕ್ಷ ಲೋಕೇಶ್, ಜಿಲ್ಲಾ ಮತ್ತು ರಾಜ್ಯ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.