ಚಿತ್ರದುರ್ಗ: ಅಖಿಲ ಕರ್ನಾಟಕ ರಾಜ್ಯ ಛಲವಾದಿ ಗುರುಪೀಠ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಅಭಿವೃದ್ದಿ ಸಮಿತಿಯಿಂದ ಕೆಚ್ಚೆದೆಯ ವೀರ ಮಹಿಳೆ ಒನಕೆ ಓಬವ್ವಳ ಪುಣ್ಯಸ್ಮರಣೆಯನ್ನು ಐತಿಹಾಸಿಕ ಚಿತ್ರದುರ್ಗದ ಕೋಟೆಯಲ್ಲಿರುವ ಸಮಾಧಿ ಬಳಿ ಭಾನುವಾರ ಆಚರಿಸಲಾಯಿತು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ ಹಾಗೂ ಮದಕರಿನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಕೋಟೆಗೆ ತೆರಳಿದ ಬಸವನಾಗಿದೇವಸ್ವಾಮಿ ಹಾಗೂ ಛಲವಾದಿ ಮುಖಂಡರುಗಳು ಒನಕೆ ಓಬವ್ವ ಸಮಾಧಿಗೆ ಪೂಜೆ ಸಲ್ಲಿಸಿದರು.

ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಪುಣ್ಯಸ್ಮರಣೆಯ ಸಾನಿಧ್ಯ ವಹಿಸಿ ಮಾತನಾಡಿ ಯಾವುದೆ ಆಸೆಯಿಲ್ಲದೆ ನಿಸ್ವಾರ್ಥವಾಗಿ ಕೋಟೆಯ ರಕ್ಷಣೆಗಾಗಿ ಹೋರಾಡಿ ಧೀರ ಮಹಿಳೆ ಒನಕೆ ಓಬವ್ವ ಶತ್ರುಗಳನ್ನು ಸದೆಬಡಿದು ಚಿತ್ರದುರ್ಗದ ಕೋಟೆಯನ್ನು ರಕ್ಷಿಸದಿದ್ದರೆ ಕೊಳ್ಳೆಹೊಡೆಯುತ್ತಿದ್ದರು. ನೀರು, ನೆಲ, ಜಲದ ಉಳಿವಿಗಾಗಿ ಹೋರಾಡಿದ ಒನಕೆ ಓಬವ್ವಳನ್ನು ಎಲ್ಲರೂ ಸ್ಮರಿಸಿಕೊಳ್ಳಲೇಬೇಕು ಎಂದು ಹೇಳಿದರು.
ಯಾವುದೇ ತರಬೇತಿಯಿಲ್ಲದೆ ಸ್ವಂತ ಇಚ್ಚಾಶಕ್ತಿ ಹಾಗೂ ಧೈರ್ಯದಿಂದ ಶತ್ರುಗಳ ವಿರುದ್ದ ಒನಕೆ ಓಬವ್ವ ಹೋರಾಡದಿದ್ದರೆ ಈಗ ನಾವು ನೋಡುತ್ತಿರುವ ಕೋಟೆ ಉಳಿಯುತ್ತಿರಲಿಲ್ಲ. ದೊಡ್ಡ ದುರಂತ ನಡೆದು ಹೋಗುತ್ತಿತ್ತು. ಅದಕ್ಕಾಗಿ ನಾವುಗಳು ಓಬವ್ವಳನ್ನು ಶಕ್ತಿದೇವತೆಯನ್ನಾಗಿ ಕಾಣುತ್ತಿದ್ದೇವೆ. ಓಬವ್ವಳ ಸಮಾಧಿ ಅಭಿವೃದ್ದಿಯಾಗಬೇಕು ಎಂದು ಪುರಾತತ್ವ ಇಲಾಖೆಯನ್ನು ಒತ್ತಾಯಿಸಿದರು.

ಅಖಿಲ ಕರ್ನಾಟಕ ರಾಜ್ಯ ಛಲವಾದಿ ಗುರುಪೀಠದ ರಾಜ್ಯಾಧ್ಯಕ್ಷ ಕೆ.ಧನಂಜಯ, ಕಾರ್ಯಾಧ್ಯಕ್ಷ ವೈ.ತಿಪ್ಪೇಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಹರಿಹರ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ನಾಗರಾಜ್ ಕೆ.ಟಿ.ನೆಲ್ಲಿಕಟ್ಟೆ, ಕಾರ್ಯದರ್ಶಿ ಎ.ಡಿ.ನಿರಂಜನಮೂರ್ತಿ, ಖಜಾಂಚಿ ಎಸ್.ತಿಪ್ಪೇಸ್ವಾಮಿ ಸೇರಿದಂತೆ ಛಲವಾದಿ ಸಮಾಜದ ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.