ಚಿತ್ರದುರ್ಗ: ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಇದಕ್ಕೆ ಪೂರಕವಾಗಿ ಪಕ್ಷ ಸಂಘಟನೆ ಮಾಡಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕೆಂದು ಶಕ್ತಿಕೇಂದ್ರದ ಪದಾಧಿಕಾರಿಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಕರೆ ನೀಡಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರಗಳ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿರುವ 19 ಅಂಶಗಳನ್ನು ಪಕ್ಷ ಸಂಘಟನೆಯಲ್ಲಿ ಅನುಷ್ಠಾನಗೊಳಿಸಬೇಕು. ಬೂತ್ ಮಟ್ಟದ ಪ್ರಮುಖರು, ಪದಾಧಿಕಾರಿಗಳು ಸೇರಿ ತಮ್ಮ ತಮ್ಮ ಶಕ್ತಿ ಕೇಂದ್ರಗಳಲ್ಲಿ ಗೋಡೆ ಬರಗಳನ್ನು ಬರೆಸಬೇಕು. ಮತದಾರರ ಪಟ್ಟಿ ತಯಾರಿಸಬೇಕು. ಜನರ ಮನೆ ಮನೆಗೆ ತೆರಳಿ ಪ್ರತಿ ಮತದಾರರನ್ನು ತಲುಪುವ ಕೆಲಸವಾಗಬೇಂದು ಹೇಳಿದರು.
ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಶ್ರಮವಹಿಸಿ ಪಕ್ಷ ಸಂಘಟನೆ ಮಾಡಬೇಕು. ಅಗತ್ಯವಿರುವ ಕಡೆಗಳಲ್ಲಿ ಶಾಸಕರ ಸಹಕಾರ ಪಡೆದುಕೊಳ್ಳಬೇಕು. ನಾವು ಮಾಡುವ ಕೆಲಸ ಯಶಸ್ವಿಯಾಗಬೇಕಾದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ಧಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಎಲ್ಲ ಕಡೆ ಪಕ್ಷದ ನಾಯಕರು, ಮುಖಂಡರು ಬಂದು ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ ಎಲ್ಲರೂ ಜವಾಬ್ಧಾರಿಯಿಂದ ಕೆಲಸ ಮಾಡಬೇಕು. ಅಂದಾಗ ಮಾತ್ರ ನಿರ್ಧಿಷ್ಟ ಗುರಿ ಮಟ್ಟಲು ಸಾಧ್ಯ ಎಂದು ಸಲಹೆ ಮಾಡಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ನಗರ ಮಂಡಲ ಹಾಗೂ ಗ್ರಾಮಾಂತರ ಮಂಡಲದ ಪ್ರಮುಖರನ್ನು ಕರೆದು ಇಂದು ಪಕ್ಷ ಸಂಘಟನೆ ಕುರಿತು ಚರ್ಚಿಸಲಾಗಿದೆ. ಶಕ್ತಿ ಕೇಂದ್ರಗಳ ಮುಖಂಡರು ಏನಾದರೂ ನೂನ್ಯತೆಗಳಿದ್ದಲ್ಲಿ ಸರಿಪಡಿಸುವ ಕೆಲಸ ಮಾಡಬೇಕು. ಮುಖಂಡರು ನೀಡಿದ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡಬೇಕು. ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ರೈತ ಸಮಾವೇಶ ನಡೆಯಲಿದೆ. ಹಾಗಾಗಿ ಪಕ್ಷದ ಹಿರಿಯರು ಆಗಾಗ ಬರುತ್ತಿರುತ್ತಾರೆ. ಅವರು ಪರಿಶೀಲಿಸಿದಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ಕಿವಿಮಾತು ಹೇಳಿದರು.
ವಿಭಾಗೀಯ ಪ್ರಮುಖ ಜಿ.ಎಂ.ಸುರೇಶ್ ಮಾತನಾಡಿ, ಚುನಾವಣೆಗೆ ಇನ್ನು ಕೇವಲ 80 ದಿನಗಳು ಮಾತ್ರ ಬಾಕಿ ಇದೆ. ಹಾಗಾಗಿ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಶಕ್ತಿ ಕೇಂದ್ರಗಳ ಪ್ರಮುಖರು ಬಿಎಲ್‍ಎ 2 ಗಳನ್ನು ನೇಮಿಸಿ ತಾಲ್ಲೂಕು ಕಚೇರಿಗೆ ಪಟ್ಟಿ ಸಲ್ಲಿಸಬೇಕು. ಬೂತ್‍ಗಳಲ್ಲಿ ಮತದಾರರನ್ನು ನೊಂದಾಯಿಸಿಕೊಳ್ಳುವ ಕೆಲಸ ಮಾಡಬೇಕು. ಸಾಧ್ಯವಾದಷ್ಟು ಅಲ್ಲಿನ ಜನರ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸುವ ವ್ಯವಸ್ಥೆ ಮಾಡಬೇಕು ಎಂದು ಶಕ್ತಿ ಕೇಂದ್ರಗಳ ಪ್ರಮುಖರ ಕಾರ್ಯ ವೈಖರಿ ಬಗ್ಗೆ ವಿವರಿಸಿದರು.
ಜಿಲ್ಲಾ ಉಪಾಧ್ಯಕ್ಷ ಶಿವಣ್ಣಾಚಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳಿ, ಗ್ರಾಮಾಂತರ ಅಧ್ಯಕ್ಷ ಸುರೇಶ್ ಸಿದ್ದಾಪುರ, ನಗರಾಧ್ಯಕ್ಷ ಲೀಲಾಧರ ಠಾಕೂರ್, ಮಹಿಳಾ ಮೋರ್ಚಾ ಅಧ್ಯಕ್ಷ ಶ್ಯಾಮಲಾ ಶಿವಪ್ರಕಾಶ್, ಎಸ್.ಟಿ. ಮೋರ್ಚಾ ಮಂಜುನಾಥ್, ಶಂಭು ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ್ ಬೇದ್ರೆ ಸ್ವಾಗತಿಸಿದರು.