ಚಿತ್ರದುರ್ಗ: ವಿಧಾನಪರಿಷತ್ ಸದಸ್ಯ ರಘುಆಚಾರ್ ಬುರುಡೆ ಬಿಡುವುದನ್ನು ನಿಲ್ಲಿಸಿ ಬರಡು ಜಿಲ್ಲೆಯ ಜನರ ಒಳಿತಿಗಾಗಿ ಕೆಲಸ ಮಾಡಲಿ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಅಭಿವೃದ್ದಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ರಮಾನಾಗರಾಜ್ ಸವಾಲು ಹಾಕಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ಬೇರೆ ಕಡೆ ಶಿಫ್ಟ್ ಆದರೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟ ಮಾಡುವುದಾಗಿ ರಘು ಆಚಾರ್ ಹೇಳಿರುವುದು ಕೇವಲ ರಾಜಕೀಯ ಗಿಮಿಕ್ ಅವರಿಗೆ ನಿಜವಾಗಿಯೂ ಬಯಲುಸೀಮೆ ಚಿತ್ರದುರ್ಗ ಜನರ ಬಗ್ಗೆ ಕಾಳಜಿ ಇದ್ದರೆ ಬೀದಿಗಿಳಿದು ಹೋರಾಟ ಮಾಡಲಿ ಎಂದು ಆಹ್ವಾನಿಸಿದರು.

ಕಳೆದ ಮಾರ್ಚ್‍ನಲ್ಲಿ ಚಿತ್ರದುರ್ಗದಲ್ಲಿ ನಡೆದ ಜನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿತ್ರದುರ್ಗಕ್ಕೆ ಯಾವುದೇ ಕೊಡುಗೆ ನೀಡದೆ ನಮ್ಮ ಜಿಲ್ಲೆಗೆ ಬರುವುದು ಬೇಡ ಎಂದು ಧರಣಿ ನಡೆಸಿದಾಗ ಪೊಲೀಸರು ನಮ್ಮನ್ನು ಬಂಧಿಸಿ ಒಂದು ದಿನವಿಡಿ ಐಮಂಗಲ ಪೊಲೀಸ್ ಠಾಣೆಯಲ್ಲಿಟ್ಟಿದ್ದರು. ಹಾಗಾಗಿ ನಮ್ಮ ಹೋರಾಟದ ಫಲವಾಗಿ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿದೆ. ಎಲ್ಲಾ ಜನಪತ್ರಿನಿಧಿಗಳು ನಮ್ಮ ಹೋರಾಟದ ಜೊತೆ ಕೈಜೋಡಿಸಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಲಿ ಎಂದು ರಮಾನಾಗರಾಜ್ ಮನವಿ ಮಾಡಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಕೆಲವು ಶಾಸಕರುಗಳು ಮಾತ್ರ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು ಬೇಕು ಎಂದು ಬಜೆಟ್‍ನಲ್ಲಿ ಧ್ವನಿಯೆತ್ತಿದ್ದಾರೆ. ಜನತೆಯಿಂದ ಆಯ್ಕೆಯಾಗಿ ಹೋದ ರಘುಆಚಾರ್ ಮೊದಲು ಜನಪರ ಕೆಲಸ ಮಾಡಲಿ. ಅಪರೂಪಕ್ಕೊಮ್ಮೆ ಹೆಲಿಕ್ಯಾಪ್ಟರ್‍ನಲ್ಲಿ ಬಂದು ಹೋಗುವ ಅವರು ಚಿತ್ರದುರ್ಗದ ಅಭಿವೃದ್ದಿಗಾಗಿ ಎಷ್ಟು ಬಾರಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ನೀಡಲಿ ಎಂದರು.
ಮೂರು ತಿಂಗಳಿಗೊಮ್ಮೆ ನಡೆಯುವ ಕೆ.ಡಿ.ಪಿ.ಹಾಗೂ ಜಿ.ಪಂ.ಸಭೆಯಲ್ಲಿ ರಘುಆಚಾರ್ ಎಷ್ಟು ಬಾರಿ ಭಾಗವಹಿಸಿದ್ದಾರೆ. ಯಾವ್ಯಾವ ವಿಷಯಗಳ ಕುರಿತು ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಜೊತೆ ಚರ್ಚಿಸಿದ್ದಾರೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ. ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿಯೇ ಕಾಣಿಸಿಕೊಳ್ಳದ ಅವರಿಗೆ ಮೆಡಿಕಲ್ ಕಾಲೇಜು ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ. ಚುನಾವಣೆಯಲ್ಲಿ ಗೆದ್ದು ಬಂದ ನಂತರ ಚಿತ್ರದುರ್ಗದಲ್ಲಿಯೆ ಮನೆ ಮಾಡಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಪೊಳ್ಳು ಭರವಸೆ ನೀಡಿ ಮೈಸೂರಿನಲ್ಲಿ ಸೆಟ್ಲ್ ಆಗಿಬಿಟ್ಟಿದ್ದಾರೆ. ತಮ್ಮ ಅನುದಾನದಲ್ಲಿ ಯಾವ್ಯವ ಕಡೆ ಎಷ್ಟೆಷ್ಟು ಆರ್.ಓ.ಪ್ಲಾಂಟ್‍ಗಳನ್ನು ಹಾಕಿದ್ದಾರೆ ಎನ್ನುವುದರ ವಿವರ ಕೊಡಲಿ. ಆಗ ಅವರ ನಿಜವಾದ ಜನಪರ ಕಾಳಜಿ ಏನೆಂಬುದು ಗೊತ್ತಾಗುತ್ತದೆ ಎಂದು ಆಕ್ರೋಶ ಹೊರಗೆಡವಿದರು.

ಅಧಿಕಾರ ಹಿಡಿಯುವ ಕಾತುರದಲ್ಲಿ ಬಾಯಿಗೆ ಬಂದಂತೆ ಮಾತನಾಡುವುದನ್ನು ಮೊದಲು ನಿಲ್ಲಿಸಲಿ. ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಹೀಗೆ ರಾಷ್ಟ್ರೀಯ ಹಬ್ಬಗಳಲ್ಲಿ ಎಷ್ಟು ಸಾರಿ ಪಾಲ್ಗೊಂಡು ದೇಶಭಕ್ತಿಯನ್ನು ಮೆರೆದಿದ್ದಾರೆ ಎನ್ನುವುದಕ್ಕೆ ಮೊದಲು ರಘುಆಚಾರ್ ಆತ್ಮಾವಲೋಕನ ಮಾಡಿಕೊಂಡು ಇನ್ನು ಮುಂದಾದರೂ ಮತದಾರರನ್ನು ಯಾಮಾರಿಸುವ ಇಂತಹ ಹೇಳಿಕೆಗಳನ್ನು ನಿಲ್ಲಿಸಿ ಹೋರಾಟ ಸಮಿತಿ ಜೊತೆ ಜಿಲ್ಲೆಯ ಅಭಿವೃದ್ದಿಗೆ ಕೈಜೋಡಿಸಲಿ ಎಂದು ವಿನಂತಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಅಭಿವೃದ್ದಿ ಹೋರಾಟ ಸಮಿತಿಯ ಉಪಾಧ್ಯಕ್ಷರುಗಳಾದ ಕೆ.ಆರ್.ನಾಗಪ್ಪ, ಎಲ್.ತಿಪ್ಪೇಸ್ವಾಮಿ, ಶುಭ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.