ಚಿತ್ರದುರ್ಗ: ಪರಮಪವಿತ್ರವಾದ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಚಂದ್ರವಳ್ಳಿ, ಈದ್ಗಾಮೈದಾನ, ಎ.ಪಿ.ಎಂ.ಸಿ., ಅಗಸನಕಲ್ಲು, ಚೇಳುಗುಡ್ಡ ಕೋಹಿನೂರ್ ಈದ್ಗಾ ಮೈದಾನದಲ್ಲಿ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರರು ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು.
ಮೂವತ್ತು ದಿನಗಳ ಕಾಲ ಒಂದು ಹೊತ್ತು ಉಪವಾಸ ವೃತ ಆಚರಿಸಿದ ಮುಸ್ಲಿಂ ಬಾಂಧವರು ಶ್ವೇತ ವಸ್ತ್ರಗಳನ್ನು ಧರಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಂತರ ಪರಸ್ಪರರು ಅಪ್ಪಿಕೊಳ್ಳುವ ಮೂಲಕ ರಂಜಾನ್ ಹಬ್ಬದ ಸಡಗರ ಸಂಭ್ರಮದಲ್ಲಿ ಮಿಂದೆದ್ದರು.
ಚಿಣ್ಣರು ಕೂಡ ಒಬ್ಬರನ್ನೊಬ್ಬರು ತಬ್ಬಿಕೊಂಡು ಹಬ್ಬದ ಖುಷಿಯನ್ನು ಸವಿದರು.
ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್ ಸೇರಿದಂತೆ ಮುಸ್ಲಿಂ ಸಮುದಾಯದ ಅನೇಕ ಮುಖಂಡರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಹೊಳಲ್ಕೆರೆ ರಸ್ತೆ, ದಾವಣಗೆರೆ ರಸ್ತೆಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ಸಂಚಾರವನ್ನು ನಿಯಂತ್ರಿಸಲಾಯಿತು. ಎಲ್ಲೆಡೆ ಪೊಲೀಸ್ ಭದ್ರತೆಯನ್ನು ಹಾಕಿದ್ದರಿಂದ ರಂಜಾನ್ ಹಬ್ಬ ಶಾಂತಿಯುತವಾಗಿ ನಡೆಯಿತು.