ಚಳ್ಳಕೆರೆ: ಅನಾದಿ ಕಾಲದಿಂದ ನಡೆದುಕೊಂಡ ಬಂದ ಪದ್ದತಿಯಂತೆ ಹಿಂದುಗಳ ಹೊಸ ವರ್ಷವೂ ವಿಶೇಷವಾದ ಆಚರಣೆಯನ್ನು ಹೊಂದಿದೆ. ಹೊಸ ಚಿಗುರು ಹೊಸ ಬೆಳಕಿನ ಹಬ್ಬ ಯುಗಾದಿ ಹಿಂದುಗಳ ಪಾಲಿಗೆ ವಿಶೇಷ.
ತಾಲ್ಲೂಕಿನ ಕಾಪರಹಳ್ಳಿಯ ಗ್ರಾಮಸ್ಥರು ಪ್ರತಿವರ್ಷವೂ ಯುಗಾದಿ ಹಬ್ಬದ ಎರಡನೇ ದಿನ ಗ್ರಾಮದ ಸುರಕ್ಷತೆಗಾಗಿ ಜಾನುವಾರುಗಳನ್ನು ಯಾವುದೇ ರೋಗ ರುಜನೆಗಳಿಗೆ ತುತ್ತಾಗದಂತೆ ಕಾಡುವಂತೆ ಗ್ರಾಮ ದೇವತೆಯನ್ನು ಪ್ರಾರ್ಥಿಸಿ ಗ್ರಾಮದಿಂದ ಹೊರ ಹೋಗಿ ಬೇಟೆ ಆಡಿಕೊಂಡು ಬಂದು ತಮ್ಮ ಇಷ್ಟ ದೇವರ ಪೂಜೆಯನ್ನು ಪ್ರತಿ ವರ್ಷವೂ ನೆರವೇರಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಮಾರ್ಚ್ ೧೮ರ ಭಾನುವಾರ ಗ್ರಾಮದ ಎಲ್ಲಾ ಸಮುದಾಯದ ಯುವಕರು ಸೇರಿ ಹಿಂದಿನಿಂದಲೂ ನಡೆಸಿಕೊಂಡು ಬಂದ ಉಲುಸು ಪದ್ದತಿಯಂತೆ ಯುಗಾದಿ ಹಬ್ಬದ ಎರಡನೇ ದಿನ ಬೇಟೆ ಆಡಲು ಹೋಗಿ ಅವರಿಗೆ ಸಿಕ್ಕಿ ಪ್ರಾಣಿಯನ್ನು ತಮ್ಮ ಇಷ್ಟ ದೇವರಿಗೆ ನೈವ್ಯದ್ಯವಾಗಿ ಅರ್ಪಿಸಿ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ವಿಶೇಷವಾಗಿ ಪ್ರಾರ್ಥಿಸುತ್ತಾರೆ. ಈ ಕಾರ್ಯದಲ್ಲಿ ಇಡೀ ಗ್ರಾಮದ ಭಕ್ತ ವೃಂದವೇ ದೇವಸ್ಥಾನದ ಮುಂದೆ ಉಪಸ್ಥಿತರಿದ್ದು, ದೇವರ ಕಾರ್ಯವನ್ನು ನಡೆಸಿಕೊಡುವರು.

ಈ ಬಗ್ಗೆ ಗ್ರಾಮದ ಹಿರಿಯ ಕೃಷ್ಣಪ್ಪ ಮಾತನಾಡಿ, ನಮ್ಮ ಪೂರ್ವಜನರು ನಡೆಸಿಕೊಂಡ ಬಂದ ಪದ್ದತಿಯನ್ನು ನಾವು ಇಂದಿಗೂ ಸಹ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಪ್ರತಿವರ್ಷ ಯುಗಾದಿಯ ಎರಡನೇ ದಿನ ಬೆಳಗ್ಗೆ ಗ್ರಾಮ ದೇವರಿಗೆ ನಮಸ್ಕರಿಸಿ ಎಲ್ಲರೂ ಬೇಟೆಗೆ ತೆರಳುವರು. ಬೇಟೆಯಾಡಿ ಬಂದ ನಂತರ ಬೇಟೆಯೂ ಸೇರಿದಂತೆ ದೇವರಿಗೆ ಪೂಜೆ ಸಲ್ಲಿಸಿ ನೈವ್ಯೆದ್ಯ ಸಮರ್ಪಿಸುವರು. ಹೀಗೆ ಮಾಡುವುದರಿಂದ ನಮ್ಮ ಗ್ರಾಮದಲ್ಲಿ ಎಂದಿಗೂ ಯಾವುದೇ ರೀತಿಯ ಅಸಮದಾನವಿಲ್ಲದೆ ಎಲ್ಲರೂ ಪ್ರೀತಿ ವಿಶ್ವಾಸ, ಸೌಹಾರ್ಥತೆಯಿಂದ ಜೀವನ ನಡೆಸುತ್ತಿದ್ದಾರೆ ಎಂದರು.