ಚಿತ್ರದುರ್ಗ: ರೈತ ನಾಯಕ ಬಿಜೆಪಿ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಬಿಜೆಪಿ.ಕಚೇರಿಯಲ್ಲಿ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಕಾರ್ಯಕರ್ತರು ಹಾಗೂ ಮುಖಂಡರುಗಳು ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್ ಮಾತನಾಡಿ ಜೆಡಿಎಸ್.ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಹಿಂಭಾಗಿಲಿನಿಂದ ಅಧಿಕಾರ ಹಿಡಿಯಲು ಹೊರಟಿವೆ. ಅದಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ವರ್ತನೆಗೆ ಬೇಸತ್ತು ಬಿಜೆಪಿ.ಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಬಿ.ಎಸ್.ಯಡಿಯೂರಪ್ಪನವರು ರೈತರ ಸಾಲ ಮನ್ನ ಮಾಡಲಿದ್ದಾರೆ ಎಂದು ಹೇಳಿದರು.
೩೮ ವರ್ಷಗಳ ಕಾಲ ಸುಧೀರ್ಘ ರಾಜಕೀಯ ಜೀವನದಲ್ಲಿ ಬಿ.ಎಸ್.ಯಡಿಯೂರಪ್ಪನವರು ರೈತರು, ಶೋಷಿತರು, ದೀನ ದಲಿತರ ಪರವಾಗಿರುವುದರಿಂದ ಈ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ಸಿಗಲು ಕಾರಣವಾಯಿತು. ರಾಜ್ಯದಲ್ಲಿ ಐದು ವರ್ಷಗಳ ಕಾಲ ದುರಾಡಳಿತ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಲೆ ಭಾಗ್ಯಗಳನ್ನು ನೀಡಿದ್ದಾರೆ. ಸೋನಿಯಾಗಾಂಧಿಗೆ ಚಮಚಗಿರಿ ಮಾಡಿಕೊಂಡು ಕಾಲಹರಣ ಮಾಡಿದ್ದನ್ನು ಬಿಟ್ಟರೆ ರಾಜ್ಯದಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ. ನಿಷ್ಠಾವಂತ ಅಧಿಕಾರಿಗಳು, ಸಾಮಾನ್ಯ ಜನರಿಗೆ ರಕ್ಷಣೆ ನೀಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದ್ದೆ ಸೋಲಿಗೆ ಮುಳುವಾಯಿತು. ಕಾರ್ಯಕರ್ತರ ಸತತ ಪರಿಶ್ರಮ ಹಾಗೂ ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾರವರ ಪ್ರವಾಸ ಕೂಡ ಬಿಜೆಪಿ.ಗೆಲುವಿಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್.ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸುತ್ತಾರೆ ಎಂದರು.
ಬಿಜೆಪಿ.ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ನಗರಸಭೆ ಸದಸ್ಯೆ ಶ್ಯಾಮಲ ಶಿವಪ್ರಕಾಶ್ ಮಾತನಾಡಿ ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ದುರಾಡಳಿತಕ್ಕೆ ಬೇಸತ್ತ ಜನತೆ ಈ ಬಾರಿಯ ಚುನಾವಣೆಯಲ್ಲಿ ೧೦೩ ಸ್ಥಾನಗಳಲ್ಲಿ ಬಿಜೆಪಿ.ಯನ್ನು ಗೆಲ್ಲಿಸಿದ್ದಾರೆ ಇದೊಂದು ಅಭೂತಪೂರ್ವ ಗೆಲುವು ಎಂದು ಸಂತಸ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ.ಅಧಿಕಾರದಲ್ಲಿರುವುದರಿಂದ ರಾಜ್ಯದಲ್ಲಿಯೂ ಅದೇ ಪಕ್ಷ ಆಡಳಿತಕ್ಕೆ ಬಂದರೆ ನಾಡಿನ ಅಭಿವೃದ್ದಿಗೆ ನೆರವಾಗಲಿದೆ ಎಂಬ ಮಹದಾಸೆಯಿಂದ ರಾಜ್ಯದ ಜನತೆ ಪಕ್ಷವನ್ನು ಗೆಲ್ಲಿಸಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರೈತರ ಸಾಲ ಮನ್ನ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ರಾಜ್ಯದ ಜನರನ್ನು ಸೋಮಾರಿಗಳನ್ನಾಗಿ ಮಾಡುವ ಯಾವುದೇ ಯೋಜನೆಗಳನ್ನು ನಮ್ಮ ಪಕ್ಷ ಜಾರಿಗೆ ತರುವುದಿಲ್ಲ. ಅದಕ್ಕೆ ಬದಲಾಗಿ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಭಿಗಳಾಗಿ ದುಡಿಯುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಸ್ಥಾನಗಳಲ್ಲಿ ಬಿಜೆಪಿ.ಜಯಗಳಿಸಿರುವುದು ಪಕ್ಷದ ತತ್ವ ಸಿದ್ದಾಂತಗಳಿಗೆ ಸಿಕ್ಕ ಜಯ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಬಿಜೆಪಿ.ಕಚೇರಿ ಸಮೀಪವಿರುವ ನಿವಾಸಿಗಳಿಗೆ ಕಾರ್ಯಕರ್ತರು ಸಿಹಿ ಹಂಚಿ ಖುಷಿಪಟ್ಟರು.
ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‌ಬೇದ್ರೆ, ನಗರ ಮಂಡಲ ಅಧ್ಯಕ್ಷ ಪಿ.ಲೀಲಾಧರಠಾಕೂರ್, ರಾಜುಶಿವನಕೆರೆ, ಮಂಜಣ್ಣ, ಶಂಭು, ಸತ್ಯನಾರಾಯಣ, ಅಸ್ಲಾಂ, ರೇಣುಕೇಶ್, ಬಸಮ್ಮ, ಶಾಂತಮ್ಮ, ವೀಣ, ಜಯಮ್ಮ, ಜಯಕುಮಾರಿ, ಅನ್ನಪೂರ್ಣಮ್ಮ, ವೇದಾವತಿ, ಮೆಹಬೂಬಿ, ಅಮೀನಾ ಇನ್ನು ಮುಂತಾದವರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.