ಚಿತ್ರದುರ್ಗ: ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನಗರಸಭೆ ಸಹಯೋಗದೊಂದಿಗೆ ಸಾರ್ವತ್ರಿಕ ಲೋಕಸಭಾ ಚುನಾವಣೆ ಕುರಿತು ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬುಧವಾರ ರಾತ್ರಿ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟ ಮೋಂಬತ್ತಿ ಮೆರವಣಿಗೆ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜನತೆಯಲ್ಲಿ ಮತದಾನ ಕುರಿತು ಅರಿವು ಮೂಡಿಸಿತು.
ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಏ.18 ರಂದು ನಡೆಯುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ. ರಜೆ ಇದೆ ಎಂದು ಊರುಗಳಿಗೆ ಹೋಗಿ ಮತದಾನದಿಂದ ವಂಚಿತರಾಗಬೇಡಿ. ದೇಶದ ಪ್ರಜೆಗಳಿಗೆ ಸಂವಿಧಾನ ನೀಡಿರುವ ಸರ್ವಶ್ರೇಷ್ಟವಾದ ಮತದಾನದ ಹಕ್ಕನ್ನು ತಪ್ಪದೆ ಎಲ್ಲರೂ ಚಲಾಯಿಸಿದಾಗ ಮಾತ್ರ ಸಂವಿಧಾನದ ಆಶಯಗಳು ಯಶಸ್ವಿಯಾಗಲು ಸಾಧ್ಯ ಎಂದು ಕರೆ ನೀಡಿದರು.

ನಗರಸಭೆ ಪೌರಾಯುಕ್ತರಾದ ಲಕ್ಷ್ಮಿ, ಸಮುದಾಯ ಸಂಘಟನಾಧಿಕಾರಿ ಮಂಜುಳಮ್ಮ, ಕಂದಾಯಾಧಿಕಾರಿ ವಾಸೀಂ, ಪರಿಸರ ಇಂಜಿನಿಯರ್ ಜಾಫರ್, ಎ.ಇ.ಇ.ರವಿಶಂಕರ್, ಜೆ.ಇ.ಕೃಷ್ಣಮೂರ್ತಿ, ನಗರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಮೇಣದಬತ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.