ಚಿತ್ರದುರ್ಗ: ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ಗುರುವಾರ ಮಾಸ್ಕ್ ದಿನವನ್ನಾಗಿ ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು ಅವರು ನಗರಸಭೆ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೊರೊನಾ ವೈರಸ್ ಬಂದಿರುವುದರಿಂದ ಕೈ ಕುಲುಕಿಸುವ ಬದಲು ನಮಸ್ಕರಿಸುವುದು, ಹೊರಗಡೆ ಯಿಂದ ಮನೆಗೆ ಬಂದವರಿಗೆ ತಕ್ಷಣ ಕೈಕಾಲು ಮುಖ ತೊಳೆದುಕೊಂಡು ಮನೆ ಒಳಗೆ ಬರುವಂತಾಗುವುದು ನಮ್ಮ ದೇಶದ ಸಂಸ್ಕøತಿ.  ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಜನ ಪಾಶ್ಚಾತ್ಯ ಸಂಸ್ಕøತಿಗೆ ಮಾರುಹೋಗಿ ನಮ್ಮ ದೇಶದ ಸಂಸ್ಕøತಿ ಮರೆತಿದ್ದರು.  ಇದೀಗ ನಮ್ಮ ದೇಶದ ಸಂಸ್ಕøತಿಯನ್ನು  ಪುನಃ ಚಾಚುತಪ್ಪದೆ ಪಾಲಿಸುವುದನ್ನು ನಾವು ರೂಢಿಸಿಕೊಳ್ಳಬೇಕಿದೆ.  ಹೀಗಾದಾಗ ಮಾತ್ರ ಕೂಡ ಕೋವಿಡ್-19 ಹೊಗಲಾಡಿಸಬಹುದು ಎಂದರು.

ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ಕೋವಿಡ್-19 ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕೊರೊನಾವನ್ನು ತಡೆಗಟ್ಟುವ ಕ್ರಮ ಕೈಗೊಳ್ಳಲು ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸಾರ್ವಜನಿಕರು ಮಾಸ್ಕ್ ಧರಿಸಿಯೇ ಮಾತನಾಡಬೇಕು, ಮಾಸ್ಕ್ ಅನ್ನು ದಿನಕ್ಕೆ ಮೂರು ಬಾರಿ ಬದಲಾಯಿಸುವುದು ಅಗತ್ಯ, ಬೈಕ್ ಮತ್ತು ಬಸ್ಸುಗಳಲ್ಲಿ ಪ್ರಯಾಣಿಸುವಾಗ, ಸಾರ್ವಜನಿಕ ಸ್ಥಳಗಳಲ್ಲಿ, ಜನಜಂಗುಳಿ ಇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೂಕ್ತ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಮಾತನಾಡಿ, ಲಾಕ್‍ಡೌನ್ ಸಡಿಲಿಸಿದ ಮಾತ್ರಕ್ಕೆ ಕೊರೊನಾ ಸಂಪೂರ್ಣವಾಗಿ ಹೋಗಿದೆ ಎಂದಲ್ಲ.  ಕೊರೋನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ.  ಇದನ್ನು ಸಂಪೂರ್ಣವಾಗಿ ತಡೆಗಟ್ಟಲು  ಬರಿ ನಾವು ಮಾತ್ರ ಸುರಕ್ಷಿತವಾಗಿದ್ದರೆ  ಸಾಲದು, ನಮ್ಮ ಅಕ್ಕಪಕ್ಕದವರ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು. ಸಾರ್ವಜನಿಕ  ಸ್ಥಳಗಳಲ್ಲಿ ಹೆಚ್ಚು ಜನರು ಸೇರಬಾರದು ಮತ್ತು ಯಾರಾದರು ಮಾಸ್ಕ್ ಧರಿಸದಿದ್ದಲ್ಲಿ ಅಂತವರಿಗೆ ಮಾಸ್ಕ್ ಧರಿಸುವಂತೆ ತಿಳಿ ಹೇಳಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ.ಕೆ.ಎಲ್. ಪಾಲಾಕ್ಷ ಮಾತನಾಡಿ, ಇಂದು ರಾಜ್ಯದಲ್ಲೆಡೆ ಮಾಸ್ಕ್ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಕೋವಿಡ್-19 ವೈರಸ್ ಅನ್ನು ಹೋಗಲಾಡಿಸಲು ಮಾಸ್ಕ್ ಧರಿಸುವುದು ಅಗತ್ಯವಾಗಿದ್ದು ಮಾಸ್ಕ್ ಧರಿಸುವುದರಿಂದ ಶೇ.90 ರಷ್ಟು ರಕ್ಷಣೆ ಮಾಡುತ್ತದೆ ಅಲ್ಲದೆ ಜಿಲ್ಲೆಯಲ್ಲಿ ಹೊರರಾಜ್ಯ, ದೇಶದಿಂದ ಬಂದ 43 ಕೋವಿಡ್ ಸೋಂಕಿತರು, ಇದೀಗ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜಿಲ್ಲೆಯ ಒಳಗಡೆ ಯಾವುದೇ ಸೋಂಕು ಹರಡದೇ ಇರುವುದರಿಂದ, ಆತಂಕವಿಲ್ಲ.  ಆದರೂ ಸಾರ್ವಜನಿಕರು ಹೆಚ್ಚಿನ ಜಾಗೃತಿಯನ್ನು ಕಾಪಾಡಿಕೊಳ್ಳಬೇಕು ಎಂದರು.

ಜಾಗೃತಿ ಜಾಥಾ ಕಾರ್ಯಕ್ರಮವು ನಗರಸಭೆ ಕಚೇರಿಯಿಂದ ಚಾಲನೆಗೊಂಡು ಒನಕೆ ಓಬವ್ವ ವೃತ್ತ, ಗಾಂಧಿ ವೃತ್ತ ಮಾರ್ಗವಾಗಿ ಪುನಃ ನಗರಸಭೆ ಆವರಣಕ್ಕೆ ತಲುಪಿತು.

ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಹನುಮಂತರಾಜ್, ಉಪವಿಭಾಗಾಧಿಕಾರಿ ಪ್ರಸನ್ನ,  ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್, ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಬಸವರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ,  ನಗರಸಭೆ ಪರಿಸರ ಅಭಿಯಂತರ ಜಾಫರ್, ಆರೋಗ್ಯ ಮೇಲ್ವಿಚಾರಕ ಎಂ. ಖಾಸಿಂಸಾಭ್,  ಹಾಗೂ  ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.