ಚಿತ್ರದುರ್ಗ: ಹಣಬಲ, ಜನಬಲವನ್ನೇ ಮಾನದಂಡವಾಗಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ದೇಶಕ್ಕೆ ದೊಡ್ಡ ಮಾರಕವಾಗಿರುವುದರಿಂದ ದೇಶಕ್ಕೆ ಮಾದರಿಯಾಗಿರುವ ಚುನಾವಣೆಯನ್ನು ಮಾಡಬೇಕೆಂಬ ಉದ್ದೇಶದಿಂದ ಸ್ವರಾಜ್ ಇಂಡಿಯಾದಿಂದ ರಾಜ್ಯದ ಹನ್ನೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶಕ್ಕೆ ಅನ್ನ ಕೊಡುವ ರೈತರು, ದುಡಿಯುವ ವರ್ಗ ಹಾಗೂ ಕಾರ್ಮಿಕರ ವರ್ಗದ ಸಮಸ್ಯೆಗಳ ಬಗ್ಗೆ ಯಾವ ಪಕ್ಷಗಳು ಚರ್ಚಿಸುತ್ತಿಲ್ಲ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನೇ ಹೆಚ್ಚಾಗುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲದ ಕಾರಣ ಬೇಕಾಬಿಟ್ಟಿಯಾಗಿ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಹಣವಿಲ್ಲದೆಯೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮತದಾರರಲ್ಲಿ ಜಾಗೃತಿ ಮೂಡಿಸುವುದು ಸ್ವರಾಜ್ ಇಂಡಿಯಾ ಪಕ್ಷದ ಉದ್ದೇಶವಾಗಿರುವುದರಿಂದ ಹಣದ ಶಕ್ತಿಯ ಎದುರು ಜನಶಕ್ತಿಯನ್ನು ಸ್ಥಾಪಿಸಬೇಕಿದೆ. ಮುಂದಿನ ಪೀಳಿಗೆಗೆ ಭ್ರಷ್ಠಾಚಾರ ರಹಿತ ಚುನಾವಣೆ ನಡೆಸಬೇಕಾಗಿರುವುದರಿಂದ ರಾಜ್ಯಾದ್ಯಂತ ಸುತ್ತಾಡಿ ಪ್ರಭುದ್ದ ಮತದಾರರನ್ನು ಸೃಷ್ಠಿಸುತ್ತೇವೆ ಎಂದು ತಿಳಿಸಿದರು.
ಇದುವರೆವಿಗೂ ಭರವಸೆ ನೀಡಿದ ಎಲ್ಲಾ ರಾಜಕೀಯ ಪಕ್ಷಗಳ ಆಶ್ವಾಸನೆಗಳು ಯಾವುದೂ ಈಡೇರಿಲ್ಲ. ಬೆಂಬಲ ಬೆಲೆ ಇಲ್ಲದೆ ಜಿಲ್ಲೆಯಲ್ಲಿ ರೈತರಿಗೆ ೫೦ ರಿಂದ ೬೦ ಕೋಟಿ ರೂ.ಗಳಷ್ಠು ಅನ್ಯಾಯವಾಗಿದೆ. ದೇಶದಲ್ಲಿ ಆರೇಳು ಲಕ್ಷ ರೈತರು ಕೃಷಿಗಾಗಿ ಮಾಡಿದ ಸಾಲ ತೀರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲುಕೋಟೆ, ಬಸವನಬಾಗೇವಾಡಿ, ಹನೂರು, ಸೊರಬ, ಸಾಗರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತದಾರರ ಉತ್ತಮ ಬೆಂಬಲವಿದೆ ಎಂದರು.
ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ ಯಾವ ರಾಜಕೀಯ ಪಕ್ಷಗಳಿಗೂ ರೈತರ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ. ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು ತಮ್ಮ ಮನದಲ್ಲಿರುವ ಬೇಗುದಿಗಳನ್ನು ಹೊರಗೆ ಹಾಕುತ್ತಿದ್ದಾರೆ. ಹಣ ಕೊಟ್ಟು ಮತ ಕೊಂಡುಕೊಳ್ಳಬಹುದೆಂಬ ವಾತಾವರಣವನ್ನು ಎಲ್ಲಾ ಕಡೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೃಷ್ಠಿಸಿದ್ದಾರೆ. ಹಣವಿಲ್ಲದೆ ರಾಜಕೀಯ ಮಾಡುವ ನಮ್ಮಂತವರು ಮತ ಕೇಳಲು ಹೋದರೆ ಜನ ಅಂಗಿಸುವಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಸ್ವರಾಜ್ ಇಂಡಿಯಾದಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಮತದಾರಿಗೆ ತಿಳಿಸುವುದು ನಮ್ಮ ಗುರಿ ಎಂದು ನುಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ದೊಡ್ಡಮಲ್ಲಯ್ಯ ಇಲ್ಲಿಯವರೆಗೂ ಆಳಿದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳು ಮತದಾರರನ್ನು ದಿಕ್ಕುತಪ್ಪಿಸಿದ್ದಾರೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಂತೂ ನೂರಾರು ಸಮಸ್ಯೆಗಳಿವೆ. ಹಾಗಾಗಿ ಮತದಾರರು ಬದಲಾವಣೆ ಬಯಸುತ್ತಿದ್ದಾರೆ ಎಂದರು.
ನುಲೇನೂರು ಶಂಕರಪ್ಪ, ರವಿಕಿರಣ್ ಪೂರ್ಣಚ್ಚ, ಬಲ್ಲೂರು ರವಿಕುಮಾರ್, ಬಸ್ತಿಹಳ್ಳಿ ಸುರೇಶ್‌ಬಾಬು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು