ಚಿತ್ರದುರ್ಗ: ಸ್ತ್ರೀಕುಲದ ಪ್ರಥಮ ಜಗದ್ಗುರು, ಆಳವಾದ ಅಧ್ಯಯನದ ಫಲವಾಗಿ ಅತ್ಯಂತ ಶ್ರೇಷ್ಠ ಕೃತಿಗಾರ್ತಿ ಮಾತೇ ಮಹಾದೇವಿಯವರ ಅಗಲಿಕೆ ತುಂಬಲಾರದ ನಷ್ಟವಾಗಿದೆಯೆಂದು  ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ,ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಂತಾಪ ಸೂಚಿಸಿದರು.

ವಿರೋಧ – ವಿರೋಧಿಗಳನ್ನು ಲೆಕ್ಕಿಸದೇ ಕಂಚಿನ ಕಂಠದಿಂದ ಬಸವತತ್ವವಾಣಿ ಪ್ರತಿಪಾದಿಸಿದ ಕಣ್ಮಣಿ. ದಿಟ್ಟ ಅಪ್ಪಟ ಬಸವ ಅನುಯಾಯಿಯಾಗಿ ನೇರ, ನಿಷ್ಟೂರದ ಬಸವಪೀಠದ ಪೂಜ್ಯ ನಾರಿಯಾಗಿದ್ದರು.

ಪೂರ್ವಾಶ್ರಮ ಪಿತಸಂಕಲ್ಪ ಭವರೋಗ ವೈದ್ಯಾರಾಗಬೇಕೆಂಬುದು, ಗುರುಪಿತನ ಆಶ್ರಮದ ಸತ್ಸಂಕಲ್ಪದಂತೆ ಮಂತ್ರ ವೈದ್ಯರಾಗಿ ಭಕ್ತರಿಗೆ ವೈಜ್ಞಾನಿಕ, ವೈಚಾರಿಕವೆಂಬ ಔಷಧೋಪಚಾರಗಳನ್ನು ನೀಡಿ ಧಾರ್ಮಿಕ ಸತ್ಪಥ ತೋರಿದ ಸಾದ್ವಿ.

ಲಿಂಗಾಯತ ಭಕ್ತರನ್ನು ವಿಚಾರವಂತ, ಪ್ರಜ್ಞಾವಂತರನ್ನಾಗಿಮಾಡಿದ ಕೀರ್ತಿ ಮಾತಾಜಿಯವರಿಗೆ ಸಲ್ಲುತ್ತದೆ. ಬಸವತತ್ವ ಪ್ರಚಾರಕ್ಕೆ ದಿಕ್ಸೂಚಿಯಾಗಿ ಇದ್ದಂತವರು ಮಾತಾಜಿ.