ಚಿತ್ರದುರ್ಗ : ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ನಿಧನಕ್ಕೆ ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುಶಿಸಿ ಮಾತನಾಡಿದ ಶ್ರೀಗಳು, ಶರಣತತ್ತ್ವ ಅರ್ಥಾತ್ ಬಸವತತ್ತ್ವ. ಶರಣತತ್ತ್ವದಲ್ಲಿ ಬಸವತತ್ತ್ವ; ಬಸವತತ್ತ್ವದಲ್ಲಿ ಶರಣತತ್ತ್ವ ಇದೆ. ಇದು ಸೈದ್ಧಾಂತಿಕವಾಗಿರುವ ತತ್ತ್ವ. ಯಾವ ತತ್ತ್ವಸಿದ್ಧಾಂತ ಪ್ರಯೋಗಮುಖಿಯಾಗಿರುತ್ತದೋ ಅದಕ್ಕೆ ಸಾವು ಇಲ್ಲ. ೯೦೦ವರ್ಷಗಳ ಹಿಂದೆ ಬಸವ ಅಲ್ಲಮಾದಿ ಶರಣರು ಪುರುಷರು ಮತ್ತು ಸ್ತ್ರೀಯರನ್ನು ಮೊದಲ್ಗೊಂಡು ನೆಲಮಟ್ಟದ ತಳಮಟ್ಟದ ಎಲ್ಲ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದರು.

ಇಂತಹ ಅಪ್ರತಿಮ ಕಾರ್ಯವನ್ನು ಅವರು ಕೊಟ್ಟು ಹೋಗಿದ್ದಾರೆ. ಅವರು ಹಲವು ಹತ್ತು ಪ್ರಯೋಗಗಳನ್ನು ಮಾಡಿದ್ದಾರೆ. ಅಲ್ಲಿ ಪರಿವರ್ತನೆ ಮತ್ತು ಪ್ರಯೋಗ ಇವೆರಡನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋದರು. ಇವು ಅನೇಕ ಜನರ ಮೇಲೆ ಪ್ರಭಾವ ಬೀರಿದವು. ಕರ್ನಾಟಕ ಸೇರಿದಂತೆ ಭಾರತದ ಸಾವಿರಾರು ಮಠಗಳಲ್ಲಿ ಇಂತಹ ಪ್ರಯೋಗಗಳು ನಡೆದಿವೆ. ಮಾತಾಜಿಯವರು ಸ್ತ್ರೀ ಸಮಾನತೆಯನ್ನು ಜಾಗೃತಿಗೊಳಿಸಬೇಕೆಂದು ಬಸವಧರ್ಮಪೀಠ ಸ್ಥಾಪಿಸಿ ಬಸವತತ್ತ್ವವನ್ನು ಪ್ರಚಾರಪಡಿಸಿದ ಅತ್ಯಂತ ಧೈರ್ಯವಂತರು. ಇಡೀ ಆಯುಷ್ಯವನ್ನು ಬಸವತತ್ತ್ವಕ್ಕಾಗಿ ಮೀಸಲಿಟ್ಟವರು. ಹಲವಾರು ಸಾಧಕರಿಗೆ ಬಸವತತ್ತ್ವದೀಕ್ಷೆ ನೀಡಿ ಹಳ್ಳಿಯಿಂದ ದಿಲ್ಲಿಯವರೆಗೆ ಬಸವತತ್ತ್ವ ಪ್ರಸಾರ ಮಾಡಿದವರು. ಶ್ರೀಮಠದ ಜೊತೆಯಲ್ಲಿ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಮಲ್ಲಿಕಾರ್ಜುನ ಶ್ರೀಗಳು ಇದ್ದಾಗಿನಿಂದ ಅನೇಕ ಬಾರಿ ಇಲ್ಲಿಗೆ ಬಂದಿದ್ದರು. ೧೯೯೪ರಲ್ಲಿ ಕೂಡಲಸಂಗಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಬರಲು ಹೇಳಿದ್ದರು. ಅಂದು ನಾನು ಹಿರಿಯ ಶ್ರೀಗಳ ಆದೇಶದ ಮೇರೆಗೆ ಸಮಾವೇಶಕ್ಕೆ ಹೋಗಿ ಭಾಗವಹಿಸಿದ್ದೆ. ಇತ್ತೀಚೆಗೆ ಲಿಂಗಾಯತ ಸ್ವತಂತ್ರಧರ್ಮ ಹೋರಾಟದಲ್ಲಿ ಬೆಳಗಾವಿ, ಬೀದರ್, ಬೆಂಗಳೂರು ಮೊದಲಾದ ಕಡೆ ನಡೆದ ಸಮಾವೇಶಗಳಲ್ಲಿ ನಾವು ಅವರು ಭಾಗವಹಿಸಿದ್ದೆವು. ಮಹಿಳಾ ಪರವಾದ ಪೀಠವನ್ನು ಆರಂಭಿಸಿ ಸಮಾನತೆಗಾಗಿ ಹೋರಾಟ ಮಾಡಿದ್ದಾರೆ. ಬಸವತತ್ತ್ವ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಸಹಜವಾದ ಅನಾರೋಗ್ಯದಿಂದ ಲಿಂಗೆಕ್ಯರಾಗಿದ್ದಾರೆ. ನಾಡಿದ್ದು ನಡೆಯುವ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಶ್ರೀಮಠದ ಗೌರವವನ್ನು ಸಲ್ಲಿಸಲಾಗುವುದು. ಕಳೆದ ವರ್ಷ ಶ್ರೀಮಠಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ನಾವು ಅವರಿಗೆ ಶ್ರೀಮಠದಿಂದ ಗೌರವ ಸಲ್ಲಿಸಿದ್ದೆವು ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿ ಚಿಕ್ಕವಯಸ್ಸಿನಲ್ಲಿಯೇ ಲಿಂಗದೀಕ್ಷೆ ಪಡೆದು ನಿರರ್ಗಳ ಪ್ರವಚನ ಶೈಲಿಯ ಮೂಲಕ ನಾಡಿನಾದ್ಯಂತ ಮಾತಾಜಿ ಎಂದೇ ಪರಚಿತರಾಗಿದ್ದ ಇವರು ಪ್ರವಚನ, ಶರಣಸಂಸ್ಕೃತಿ ಸಾಹಿತ್ಯ ಸಂಶೋಧನೆಯ ಮೂಲಕ ಬಸವಣ್ಣ ಮತ್ತು ಸಮಕಾಲೀನರ ತತ್ತ್ವಗಳನ್ನು ಭಾರತ ಮಾತ್ರವಲ್ಲದೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಪಸರಿಸಿದರಲ್ಲದೆ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ ದೆಹಲಿ ರಾಜ್ಯಗಳಲ್ಲಿ ಬಸವ ಮಂಟಪ, ಆಶ್ರಮಗಳನ್ನು ಸ್ಥಾಪಿಸಿದ ಕೀರ್ತಿ ಮಾತಾಜಿಯವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದ್ದಾರೆ.