ಚಿತ್ರದುರ್ಗ: ಹೊಲ, ಮನೆ ಹೀಗೆ ಎಲ್ಲಾ ಕೆಲಸವನ್ನು ನಿಭಾಯಿಸಿಕೊಂಡು ಹೋಗುವ ಮಹಿಳೆಯರು ವ್ಯವಹಾರ ಜ್ಞಾನವನ್ನು ಕಲಿಯಬೇಕಾಗಿದೆ ಎಂದು ಜಿ.ಪಂ.ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಇವರುಗಳ ಸಹಯೋಗದೊಂದಿಗೆ ಜಿಲ್ಲೆಯ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಐ.ಎಂ.ಎ.ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹೊಲದಲ್ಲಿ ಕೃಷಿ ಮಾಡಿ ಬಿತ್ತಿ ಬೆಳೆಯುವತನಕ ಮಹಿಳೆಯರು ಬೇಕು. ಕೈಗೆ ಬಂದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಹಣ ಎಣಿಸುವುದು ಮಾತ್ರ ಪುರುಷರು. ಇಂತಹ ತಾರತಮ್ಯ ಏಕೆ ಎಂದು ಪ್ರಶ್ನಿಸಿದ ಸೌಭಾಗ್ಯ ಬಸವರಾಜನ್ ಬಜೆಟ್ ಪ್ಲಾನ್ ಮಾಡುವ ನೀವುಗಳು ಮಾರುಕಟ್ಟೆಗೆ ಹೋಗಿ ವ್ಯವಹಾರ ಜ್ಞಾನ ಕಲಿಯಿರಿ ಗೊತ್ತಿಲ್ಲ ಎಂದು ಮನೆಯಲ್ಲಿ ಸುಮ್ಮನೆ ಕುಳಿತುಕೊಂಡರೆ ನೀವುಗಳು ಕಲಿಯುವುದು ಯಾವಾಗ ಎಂದು ಸ್ವ-ಸಹಾಯ ಸಂಘಗಳ ಮಹಿಳೆಯರನ್ನು ಜಾಗೃತಿಗೊಳಿಸಿದರು.
ಬಡತನವಿರುವ ಭಾರತಕ್ಕೆ ಸ್ವ-ಸಹಾಯ ಸಂಘಗಳು ಬೇಕು. ಅಮೇರಿಕಾದಂತ ಮುಂದುವರೆದ ದೇಶಗಳಿಗೆ ಇಂತಹ ಸ್ವ-ಸಹಾಯ ಸಂಘಗಳ ಅವಶ್ಯಕತೆಯಿಲ್ಲ. ಸರ್ಕಾರ ಸ್ವ-ಸಹಾಯ ಸಂಘಗಳನ್ನು ಆರಂಭಿಸಿದಾಗಿನಿಂದಲೂ ಮಹಿಳೆಯರು ಒಂದು ಕಡೆ ಸೇರಲು ಅವಕಾಶವಾಯಿತು. ಮಹಿಳೆಯರ ಬಗ್ಗೆ ಸರ್ಕಾರಕ್ಕೂ ಹೆಚ್ಚು ನಂಬಿಕೆ ಇರುವುದರಿಂದ ಬ್ಯಾಂಕ್‍ಗಳಲ್ಲಿ ಬೇಗನೆ ಮಹಿಳೆಯರಿಗೆ ಸಾಲ ಸಿಗುತ್ತದೆ. ಏಕೆಂದರೆ ಪಡೆದ ಸಾಲವನ್ನು ಮಹಿಳೆಯರು ಪ್ರಾಮಾಣಿಕವಾಗಿ ಹಿಂದಿರುಗಿಸುತ್ತಾರೆ. ಜೀವನದಲ್ಲಿ ಸಮಸ್ಯೆಗಳು ಬಂದಾಗ ಮಾತ್ರ ಏನನ್ನಾದರೂ ಕಲಿಯಬಹುದು. ಸಮಸ್ಯೆಗಳನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಿ ಎಂದು ಮಹಿಳೆಯರಿಗೆ ಕರೆ ನೀಡಿದರು.
ಗ್ರಾ.ಪಂ., ತಾ.ಪಂ., ಜಿ.ಪಂ.ಹಾಗೂ ಸಹಕಾರ ಸಂಘಗಳ ಎಲ್ಲಾ ಚುನಾವಣೆಗಳಲ್ಲಿಯೂ ಸ್ಪರ್ಧಿಸಿ ಮಹಿಳೆಯರು ಅಧಿಕಾರದಲ್ಲಿದ್ದರೂ ಸಾಕಷ್ಟು ಕಡೆ ಪುರುಷರೇ ಅಧಿಕಾರ ಚಲಾಯಿಸುತ್ತಾರೆ. ಇದು ನಿಲ್ಲಬೇಕು. ಹಾಗಾಗಿ ಇಂತಹ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ವಿಚಾರಗಳನ್ನು ಶ್ರದ್ದೆಯಿಂದ ಕೇಳಿಸಿಕೊಂಡು ಜೀವನದಲ್ಲಿ ಅನಷ್ಟಾನಗೊಳಿಸಿಕೊಳ್ಳಿ ಎಂದು ಸೌಭಾಗ್ಯ ಬಸವರಾಜನ್ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕ ಎಸ್.ಆರ್.ಗಿರೀಶ್ ಮಾತನಾಡುತ್ತ ಗುಡಿಕೈಗಾರಿಕೆಗಳಲ್ಲಿ ಅನೇಕ ಉತ್ಪನ್ನಗಳನ್ನು ತಯಾರಿಸಿ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವ ಅವಕಾಶ ಸ್ವ-ಸಹಾಯ ಸಂಘಗಳ ಮಹಿಳೆಯರಿಗಿದೆ. ಸ್ವ-ಸಹಾಯ ಸಂಘಗಳು ಆರಂಭವಾದಾಗಿನಿಂದಲೂ ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಸಂಘಗಳಲ್ಲಿ ಪಡೆಯುವ ಸಾಲವನ್ನು ಬರೀ ಬಡ್ಡಿ ವ್ಯವಹಾರಕ್ಕೆ ಬಳಸಿಕೊಳ್ಳಬೇಡಿ. ಕೆಲವೊಮ್ಮೆ ನಷ್ಟ ಅನುಭವಿಸಬೇಕಾಗುತ್ತದೆ ಎಂದರು.
ಕ್ಯಾಂಡಲ್, ಫಿನಾಯಿಲ್, ಊದುಬತ್ತಿ ಹೀಗೆ ನಾನಾ ಬಗೆಯ ಉತ್ಪನ್ನಗಳನ್ನು ಮಹಿಳೆಯರು ತಯಾರಿಸಲು ಬ್ಯಾಂಕ್‍ಗಳಲ್ಲಿ ಸಾಲ ಸಿಗುತ್ತದೆ. ಸರ್ಕಾರವೂ ಕೂಡ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಗಿರ್ ತಳಿ ಹಸುಗಳನ್ನು ಸಾಕಿ ಹಾಲು ಮಾರಾಟದ ಮೂಲಕ ಹಣ ಗಳಿಕೆಗೆ ದಾರಿ ಕಂಡುಕೊಳ್ಳಬಹುದು ಎಂದು ಹೇಳಿದರು.
ಸಹಕಾರ ಸಂಘ ಎಂದರೆ ಹೊಣೆಗಾರಿಕೆ. ಜವಾಬ್ದಾರಿಯನ್ನು ನೆತ್ತಿಯ ಮೇಲೆ ಹೊತ್ತುಕೊಂಡು ಕೆಲಸ ಮಾಡುವುದೆ ಸಹಕಾರ ಸಂಘಗಳ ನೀಯತ್ತು ಎಂದು ಹೇಳಿದ ಎಸ್.ಆರ್.ಗಿರೀಶ್ ಸಹಕಾರ ಸಂಘಗಳು ಹೆಚ್ಚುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿಂಕಲ್ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಸಿ.ಸಿದ್ದಪ್ಪ, ನಿರ್ದೇಶಕ ಹೆಚ್.ಆಂಜನೇಯ, ಜಿ.ರಂಗಸ್ವಾಮಿ, ಆರ್.ಮಲ್ಲೇಶಪ್ಪ, ಡಿ.ಸಿ.ಸಿ.ಬ್ಯಾಂಕ್ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರಯ್ಯ, ತುಮಕೂರು ವಿ.ವಿ.ಯ ಪ್ರಾಧ್ಯಾಪಕಿ ಮೀನಾಕ್ಷಿ ವೇದಿಕೆಯಲ್ಲಿದ್ದರು.