ಚಿತ್ರದುರ್ಗ: ಮಳೆ ನೀರನ್ನು ಸಂಗ್ರಹಣೆ ಮಾಡುವುದರ ಮೂಲಕ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಿ ಅದನ್ನು ಕೃಷಿಗೆ ಬಳಕೆ ಮಾಡಿದಾಗ ಮಾತ್ರ ಕೃಷಿ ಬೆಳೆಯಲು ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಲಕ್ಷ್ಮೀನಾರಾಯಣ ತಿಳಿಸಿದರು.
ನಗರದ ಐಎಟಿ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಸುರಕ್ಷಿತ ಕೀಟನಾಶಕ ಬಳಕೆ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ ದೇಶದ ಉದ್ಧಾರ ಕೃಷಿಯಿಂದ ಮಾತ್ರ ಸಾಧ್ಯ. ನಾಗರೀಕತೆ ಹುಟ್ಟಿಕೊಂಡ ದಿನದಿಂದಲೇ ಕೃಷಿ ನಮ್ಮ ಮೂಲ ಕಸುಬಾಗಿ ಬೆಳೆದು ಬಂದಿದೆ. ಕೃಷಿಯ ಜತೆಗೆ ಅನೇಕ ಉಪ ಕಸುಬುಗಳು  ಕೂಡಿಕೊಂಡು ರೈತ ದೇಶಕ್ಕೆ ಅನ್ನ ಕೊಡುತ್ತಿದ್ದಾನೆ ಎಂದರು.
ಮುಂದೊಂದು ದಿನ ನೀರಿಗಾಗಿ ಆಂತರಿಕ ಯುದ್ಧಗಳೇ ನಡೆಯಬಹುದು. ಇದರ ನಿವಾರಣೆಯಾಗಬೇಕಾದರೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಆಶಯದಂತೆ ನದಿ ಜೋಡಣೆಯಾಗಬೇಕು ಸೈನಿಕ ಮತ್ತು ರೈತ ಈ ಇಬ್ಬರ ಮೇಲೆ ದೇಶ ನಿಂತಿದೆ. ಆದರೆ, ವಿಪರ್ಯಾಸವೆಂದರೆ ದೇಶದಲ್ಲಿ ಇಬ್ಬರ ಸ್ಥಿತಿಗತಿ ಶೋಚನೀಯವಾಗಿದೆ. ದೇಶ ಸ್ವಾತಂತ್ರೃಗಳಿಸಿದ ನಂತರ ನಿರಾಶ್ರಿತರ, ಆಹಾರಭದ್ರತೆ ಸಮಸ್ಯೆಗಳು ಬಾಧಿಸಿದವು. ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಗೆ ಹೆಚ್ಚು ಆಧ್ಯತೆ ನೀಡುವ ಮೂಲಕ ಕಾಲಕಾಲಕ್ಕೆ ಹಸಿರು ಕ್ರಾಂತಿ, ಕ್ಷೀರಕ್ರಾಂತಿ ಮಾಡುವ ಮೂಲಕ ಸಮಸ್ಯೆಗಳಿಂದ ಮುಕ್ತಿ ಪಡೆಯುವ ಸಾಹಸ ಮಾಡಲಾಗುತ್ತಿದೆ. ಕೈಗಾರಿಕೆಗಳಿಗೆ ಹೆಚ್ಚು ಆಧ್ಯತೆ ಸಿಕ್ಕಿದ ಪರಿಣಾಮ ಇಂದು ರೈತ ಆತ್ಮಹತ್ಯೆಗೆ ಶರಣಾಗುವಂತಾಗಿದೆ ಎಂದು ಅವರು.ಭಾರತದಲ್ಲಿ ಕೃಷಿ ಮುಂಗಾರಿನೊಡನೆ ಆಡುವ ಜೂಜಾಟವಾಗಿದೆ. ಈ ನಡುವೆಯೂ ಕೇಂದ್ರದ ನೀತಿ ಆಯೋಗ ಕಾಲ ಕಾಲಕ್ಕೆ ಕೃಷಿಗೆ ಪುನಶ್ಚೇತನ ನೀಡಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಮಾತನಾಡಿ, ಕೃಷಿ ಪರಿಕರಗಳ ಮಾರಾಟಗಾರರು ರೈತರ ಆತ್ಮಹತ್ಯೆಗೆ ಕಾರಣರಾಗಬಾರದು. ಗುಣಮಟ್ಟದ ಬೀಜ, ಗೊಬ್ಬರ ನೀಡಿದರೆ ಕೃಷಿಕ ಬೆಳೆದು ಸಾಲ ತೀರಿಸುತ್ತಾನೆ ಎಂದು ತಿಳಿಸಿದರು.
ಕಾರ್ಖಾನೆಗಳು ಸ್ಥಗಿತಗೊಂಡರೆ ಬದುಕಬಹುದು. ಆದರೆ, ರೈತ ಉಳುವುದನ್ನು ಬಿಟ್ಟರೆ ಬದುಕು ಕಷ್ಟ. ರೈತರು ಬೀಜ, ಗೊಬ್ಬರಗಳ ಅಂಗಡಿಗಳ ಜತೆ ಹೆಚ್ಚು ಸಂಪರ್ಕ ಹೊಂದಿರುತ್ತಾರೆ. ನಿಮ್ಮ ಬಳಿ ಸಾಲವಾಗಿ ಕೃಷಿ ಸಾಮಾಗ್ರಿಗಳನ್ನು ಪಡೆದಿರುತ್ತಾರೆ. ಆದ್ದರಿಂದ ಕೃಷಿ ಪರಿಕರಗಳ ಮಾರಾಟಗಾರರು ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಆತ್ಮಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಹಿಂದೆ ರೈತರೇ ಉತ್ಪಾಧನೆ ಮಾಡುತ್ತಿದ್ದ ಬಿತ್ತನೆ ಬೀಜಗಳು ರೋಗವನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುತ್ತಿದ್ದವು. ಆದರೆ, ಇಂದು ಹೈಬ್ರಿಡ್ ಕಾಲ. ಹೈಬ್ರಿಡ್ ಬೀಜಗಳಿಗೆ ರೋಗವನ್ನು ತಡೆಗಟ್ಟುವ ಶಕ್ತಿ ಇರುವುದಿಲ್ಲ. ಆದ್ದರಿಂದ ರೋಗದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸೂಕ್ತ ಔಷಧೋಪಚಾರ ಮಾಡಬೇಕು ಎಂದರು.
ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಎಂ. ರೇವಣಸಿದ್ದಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಟಿ. ಜಗದೀಶ್, ತಹಶೀಲ್ದಾರ್ ಮಲ್ಲಿಕಾರ್ಜುನ್, ಎಸಿಎಫ್ ಶ್ರೀನಿವಾಸ್, ಉಪನ್ಯಾಸಕರಾದ ಡಾ. ದೀಪಕ್, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.