ಚಿತ್ರದುರ್ಗ: ಮದ್ಯಕರ್ನಾಟಕದ ಗೌರಸಂದ್ರ ಮಾರಮ್ಮನೆ ಜಾತ್ರೆಗೆ ಹರಿದು ಬಂದು ಜನಸಾಗರ. ಚಳ್ಳಕೆರೆನಾಡಿನ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ, ಬಯಲು ಸೀಮೆಯ ಬರಡು ನಾಡಿನ ಬುಡಕಟ್ಟು ಸಮುದಾಯದ ಸಂಪ್ರದಾಯ ಬದ್ದ ಗೌರಸಮುದ್ರ ಶ್ರೀಮಾರಮ್ಮ ದೇವಿ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ನಡೆಯಿತು. ರಾಜ್ಯದ ನಾನಾಕಡೆಯಿಂದ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದಿಂದಲೂ ಸಹ ಭಕ್ತರು ಆಗಮಿಸಿ ತಮ್ಮ ಆರಾಧ್ಯ ದೇವಿಗೆ ಭಕ್ತಯನ್ನು ಸಮರ್ಪಿಸಿದರು.

ಕಳೆದ ನೂರಾರು ವರ್ಷಗಳಿಂದ ಈ ಜಾತ್ರೆಗೆ ವೈಭವಪೂರಿತವಾಗಿ ನಡೆಯುತ್ತಿದ್ದು, ಹೆಚ್ಚಾಗಿ ಚಳ್ಳಕೆರೆ ಮೊಳಕಾಲ್ಮೂರು, ಜಗಲೂರು ತಾಲ್ಲೂಕುಗಳ ಬುಡಕಟ್ಟು ಸಮುದಾಯದ ಭಕ್ತರು ಈ ದೇವಿಯ ಒಕ್ಕಲಿಗೆ ಸೇರಿದ್ದಾರೆ. ಎಂತಹ ಸಂದರ್ಭದಲ್ಲೂ ಸಹ ಇವರು ಪ್ರತಿವರ್ಷ ನಡೆಯುವ ಈ ಜಾತ್ರೆಗೆ ತಪ್ಪದೆ ಹಾಜರಾಗುತ್ತಾರೆ. ವಿಶೇಷವೆಂದರೆ ಇಂತಹ ಆಧುನಿಕ ಕಾಲದಲ್ಲೂ ಸಹ ಭಕ್ತರು ಪರಂಪರೆಯಂತೆ ಎತ್ತಿನ ಗಾಡಿಗಳಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ನಂತರ ತುಮಲು ಪ್ರದೇಶಕ್ಕೂ ಭೇಟಿ ನೀಡಿ ಅಲ್ಲೂ ಸಹ ತಮ್ಮ ಭಕ್ತಿಯ ಜೊತೆಗೆ ಕಾಣಿಕೆಯನ್ನೂ ಸಹ ಸಲ್ಲಿಸುತ್ತಾರೆ.

ಗ್ರಾಮದ ಮಾರಮ್ಮದೇವಿಯ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಸುಮಾರು ೩ ಕಿ.ಮೀ ದೂರವಿರುವ ತುಮಲು ಪ್ರದೇಶಕ್ಕೆ ಮಂಗಳವಾದ್ಯಗಳ ಸಮೇತ ದೇವಿಯ ಉತ್ಸವ ಮೂರ್ತಿಯನ್ನು ಕರೆತರಲಾಗುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯ ಭಕ್ತರು ದೇವಿಗೆ ಜಯಕಾರ ಹಾಕುತ್ತಾ ಉತ್ಸವ ಮೂರ್ತಿಯನ್ನು ಹಿಂಬಾಲಿಸುತ್ತಾರೆ. ತುಮಲು ಪ್ರದೇಶಕ್ಕೆ ಬಂದ ಉತ್ಸವ ಮೂರ್ತಿಯನ್ನು ದೇವಸ್ಥಾನದ ಪೂಜಾರರು ಸಂಪ್ರದಾಯಗಳಂತೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವರು. ಅದೇ ರೀತಿ ಪೂಜಾರ ವಂಶಸ್ಥರೇ ಗರಡುಗಂಭ ಮಿಂಚಿನಂತೆ ಏರಿ ಗರಡುಗಂಭದ ಮೇಲೆ ದೀಪ ಹಚ್ಚುತ್ತಾರೆ. ಈ ಸಂದರ್ಭದಲ್ಲಿ ಭಕ್ತರ ಜಯಕಾರ ಮುಗಿಲು ಮುಟ್ಟುತ್ತದೆ. ದೇವಿಯ ಉತ್ಸವದ ಮೂರ್ತಿಯ ಮೇಲೆ ಭಕ್ತರು ತಾವು ಬೆಳೆ ಈರುಳ್ಳಿ ಬೆಳೆ ಜೊತೆಗೆ ಹರಕೆಯಂತೆ ಕುರಿ ಮತ್ತು ಕೋಳಿ ಮರಿಗಳನ್ನು ಸಹ ಎಸೆಯುವ ವಾಡಿಕೆ ಇದೆ. ಅಷ್ಟೇಯಲ್ಲದೆ ರೈತರು ಸಹ ಈ ದೇವಿಗೆ ತಮ್ಮ ಜಾನುವಾರುಗಳ ಸಹಿತ ಪ್ರದಕ್ಷಣೆ ಹಾಕಿ ಜಾನುವಾರುಗಳಿಗೆ ಆರೋಗ್ಯ ಭಾಗ್ಯ ನೀಡುವಂತೆ ದೇವಿಯಲ್ಲಿ ಪ್ರಾರ್ಥಿಸುತ್ತಾರೆ.

ಪ್ರತಿವರ್ಷ ತುಮಲು ಪ್ರದೇಶದಲ್ಲಿ ಮಿತಿಮೀರಿ ನೂಕುನುಗ್ಗಲು ಉಂಟಾಗಿ ಸರಗಳ್ಳತನ, ಮಕ್ಕಳ ಕಾಣೆಯಾಗುವುದು ಮುಂತಾದ ಘಟನೆಗಳು ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಈ ಬಾರಿ ಪೊಲೀಸ್ ಇಲಾಖೆ ನೂತನವಾಗಿ ಒಳ ಆವರಣದಲ್ಲಿ ನಿರ್ಮಿಸಿದ್ದ ಬ್ಯಾರಿಕೇಟ್ ಯಾವುದೇ ತೊಂದರೆ ಇಲ್ಲದಂತೆ ದೇವಿಯ ದರ್ಶನ ಪಡೆಯಲು ಅನುಕೂವಾಯಿತು. ಅದೇ ರೀತಿ ತೆಂಗಿನ ಕಾಯಿ ಹೊಡೆಯಲು ಸಹ ಎರಡೂ ಬದಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ಹೆಚ್ಚಿನ ಕಿರಿಕಿರಿಗೆ ಆಸ್ಪದವಾಗಲಿಲ್ಲ.
ದೇವಸ್ಥಾನದಲ್ಲೂ ಸಹ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸರಥಿಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.