ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತಗಳ ಎಣಿಕೆ ಕಾರ್ಯ ನಗರದ ಸರ್ಕಾರಿ ವಿಜ್ಞಾನ ಕಾಲೇಜು ನೂತನ ಕಟ್ಟಡದಲ್ಲಿ ಮೇ. 23 ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಸಲು ಒಟ್ಟು 384 ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಕಲಂ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

ಲೋಕಸಭೆ ಚುನಾವಣೆ ಮತ ಎಣಿಕೆ ಕುರಿತು ನಗರದ ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಮತಗಳ ಎಣಿಕೆಯನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಒಟ್ಟು 128 ಮೈಕ್ರೋ ಅಬ್ಸರ್ವರ್ಸ್, 128 ಮತ ಎಣಿಕೆ ಮೇಲ್ವಿಚಾರಕರು ಹಾಗೂ 128 ಮತ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು 384 ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಎಲ್ಲ ಅಧಿಕಾರಿ, ಸಿಬ್ಬಂದಿಗಳು ಮೇ. 24 ರಂದು ಬೆಳಿಗ್ಗೆ 6 ಗಂಟೆಗೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವರು. ಮತ ಎಣಿಕೆ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ತಾಲ್ಲೂಕುಗಳಿಂದ ನಗರಕ್ಕೆ ಆಗಮಿಸಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕೆ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮತಗಳ ಎಣಿಕೆ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿ ಪ್ಯಾಟ್‍ಗಳನ್ನು ರ್ಯಾಂಡಮ್ ಆಗಿ ಆಯ್ಕೆ ಮಾಡಿ ಮತಗಳ ಎಣಿಕೆ ಮಾಡಲಾಗುವುದು ಎಂದರು.

ಮತಗಳ ಎಣಿಕೆ : ಮತ ಎಣಿಕಾ ಕೇಂದ್ರವಾಗಿರುವ ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದ ನೆಲ ಮಹಡಿಯಲ್ಲಿ ಕೊಠಡಿ ಸಂಖ್ಯೆ 97 ರಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ನಡೆಯಲಿದೆ. ಕೊಠಡಿ ಸಂಖ್ಯೆ 101 ರಲ್ಲಿ ಹೊಸದುರ್ಗ, ಕೊಠಡಿ ಸಂಖ್ಯೆ 136 ರಲ್ಲಿ ಸಿರಾ ಹಾಗೂ ಕೊಠಡಿ ಸಂಖ್ಯೆ 137 ರಲ್ಲಿ ಪಾವಗಡ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ನಡೆಯಲಿದೆ. ಮೊದಲನೆ ಮಹಡಿಯ ಕೊಠಡಿ ಸಂಖ್ಯೆ 99 ರಲ್ಲಿ ಚಿತ್ರದುರ್ಗ, ಕೊಠಡಿ ಸಂಖ್ಯೆ 98 ರಲ್ಲಿ ಚಳ್ಳಕೆರೆ, ಕೊಠಡಿ ಸಂಖ್ಯೆ 100 ರಲ್ಲಿ ಹಿರಿಯೂರು ಹಾಗೂ ಕೊಠಡಿ ಸಂಖ್ಯೆ 102 ರಲ್ಲಿ ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

112 ಟೇಬಲ್‍ಗಳ ವ್ಯವಸ್ಥೆ : ಮತಗಳ ಎಣಿಕೆ ಕಾರ್ಯವನ್ನು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್‍ಗಳಂತೆ 08 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆಗಾಗಿ ಒಟ್ಟು 112 ಟೇಬಲ್‍ಗಳು ಹಾಗೂ ಅಂಚೆ ಮತಪತ್ರಗಳ ಎಣಿಕೆಗಾಗಿ ಪ್ರತ್ಯೇಕವಾಗಿ 04 ಟೇಬಲ್‍ಗಳನ್ನು ನಿಗದಿಪಡಿಸಲಾಗಿದೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಗರಿಷ್ಠ 21 ಸುತ್ತು, ಚಳ್ಳಕೆರೆ- 19, ಚಿತ್ರದುರ್ಗ ಹಾಗೂ ಹಿರಿಯೂರು- 21, ಹೊಸದುರ್ಗ ಹಾಗೂ ಪಾವಗಡ- 18, ಹೊಳಲ್ಕೆರೆ-22, ಸಿರಾ- ಗರಿಷ್ಠ 20 ಸುತ್ತುಗಳ ಮತ ಎಣಿಕೆ ನಡೆಯಲಿದೆ.

ಮೊಬೈಲ್ ನಿಷಿದ್ಧ : ಮತ ಎಣಿಕಾ ಕೇಂದ್ರದೊಳಗೆ ಯಾರೂ ಸಹ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ. ಮೊಬೈಲ್, ಪೇಜರ್, ಎಲೆಕ್ಟ್ರಾನಿಕ್ ಗ್ಲಾಡ್‍ಗೇಟ್ಸ್‍ಗಳು, ಕ್ಯಾಲ್ಕುಲೇಟರ್, ಸಿಗರೇಟ್, ಬೀಡಿ, ಬೆಂಕಿಪೊಟ್ಟಣ, ಲೈಟರ್, ನೀರಿನ ಬಾಟಲಿಗಳು, ಅಥವಾ ಯಾವುದೇ ಬಾಟಲಿಗಳು, ಛತ್ರಿ, ಹರಿತವಾದ ಆಯುಧಗಳು, ಸ್ಫೋಟಕ ವಸ್ತುಗಳು, ಬೆಂಕಿ ಹತ್ತುವ ಪದಾರ್ಥಗಳು, ಇಂಕ್ ಪೆನ್‍ಗಳನ್ನು ಎಣಿಕಾ ಕೇಂದ್ರದೊಳಗೆ ತರುವಂತಿಲ್ಲ ಎಂದರು.
ನಿಷೇಧಾಜ್ಞೆ, ಮದ್ಯಪಾನ ನಿಷೇಧ ಜಾರಿ : ಮತಗಳ ಎಣಿಕೆ ನಡೆಯಲಿರುವ ಮೇ. 23 ರಂದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಜಾರಿ ಮಾಡುವ ಉದ್ದೇಶದಿಂದ ಹಾಗೂ ಅಹಿತಕರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲಂ 144 ಸೆಕ್ಷನ್ ಅನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ, ಅಲ್ಲದೆ ಜಿಲ್ಲೆಯಾದ್ಯಂತ ಮದ್ಯಪಾನ ಹಾಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬಿಗಿ ಬಂದೋಬಸ್ತ್ : ಮತ ಎಣಿಕಾ ಕೇಂದ್ರದ ಬಳಿ ಶಾಂತಿ ಹಾಗೂ ಕಾನೂನು ಪಾಲನೆಯ ಉದ್ದೇಶದಿಂದ ಮತ ಎಣಿಕಾ ಕೇಂದ್ರದ ಸುತ್ತು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು. ಮತ ಎಣಿಕಾ ಕೇಂದ್ರಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪತ್ರ ಹೊಂದಿರುವವರನ್ನು ಮಾತ್ರ ಪ್ರವೇಶ ಕಲ್ಪಿಸಲಾಗುವುದು. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಮತ ಎಣಿಕಾ ಕೇಂದ್ರದ ಸುತ್ತ ಹಾಗೂ ನಗರದಲ್ಲಿ ಗಸ್ತು, ಇತರೆ ಬಂದೋಬಸ್ತ್‍ಗಾಗಿ ಒಟ್ಟು 03- ಡಿಎಸ್‍ಪಿ, 06- ಸಿಪಿಐ, 25 ಪಿಎಸ್‍ಐ, 62 ಎಎಸ್‍ಐ, 132- ಹೆಡ್ ಕಾನ್ಸ್‍ಟೇಬಲ್, 194- ಪೊಲೀಸ್ ಪೇದೆಗಳು, 21- ಮಹಿಳಾ ಪೊಲೀಸ್ ಪೇದೆಗಳು ಹಾಗೂ 100 ಗೃಹರಕ್ಷಕ ದಳದವರು ಸೇರಿದಂತೆ ಒಟ್ಟು 543 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಯಾವುದೇ ಬಗೆಯ ರ್ಯಾಲಿ, ವಿಜಯೋತ್ಸವ ಆಚರಣೆ, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್ ಮಾಹಿತಿ ನೀಡಿದರು.

ಮತ ಎಣಿಕಾ ಕೇಂದ್ರದಲ್ಲಿ ಮತಗಳ ಎಣಿಕೆಗಾಗಿ ಕೈಗೊಂಡಿರುವ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಮತ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.