ಚಿತ್ರದುರ್ಗ: ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶವನ್ನು ಪ್ರತಿಷ್ಟಾಪಿಸಿ ವಿಸರ್ಜಿಸಿ ಪರಿಸರ ಉಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಗುಬ್ಬಚ್ಚಿ ಬರ್ಡ್ ಟ್ರಸ್ಟ್, ಚಿತ್ರ ಆಟ್ರ್ಸ್ ಅಕಾಡೆಮಿ ಇವರುಗಳ ಸಹಯೋಗದೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಚಿಕ್ಕಪೇಟೆಯಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ಮಣ್ಣಿನಿಂದ ಗಣಪತಿಯನ್ನು ತಯಾರಿಸುತ್ತಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಬಿ.ಎಸ್.ಮುರಳಿಧರ ಗಣೇಶ ಹಬ್ಬದಲ್ಲಿ ಪರಿಸರ ಸಂರಕ್ಷಣೆಯ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ಬಿತ್ತಿಪತ್ರಗಳನ್ನು ಅಂಟಿಸಿ ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ ಮಾಡದಂತೆ ಜನತೆಯಲ್ಲಿ ಅರಿವು ಮೂಡಿಸಿದರು.

ವಿಷಕಾರಕ ರಾಸಾಯನಿಕ ಲೋಹದಲೇಪಗಳನ್ನು ಬಳಸಿ ಸಿದ್ದಪಡಿಸುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ನಂತರ ವಿಸರ್ಜಿಸುವುದರಿಂದ ಜಲಮಾಲಿನ್ಯವಾಗುವುದಲ್ಲದೆ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಹಾಗಾಗಿ ಜೇಡಿ ಮಣ್ಣನಿಂದ ಮಾಡಿದ ಪುಟ್ಟಗಣಪನನ್ನು ಪೂಜಿಸಿ ನಂತರ ನಿಗಧಿಪಡಿಸಿರುವ ತೊಟ್ಟಿಗಳಲ್ಲಿ ಮಾತ್ರ ವಿಸರ್ಜಿಸಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು.

ನಾಗರಾಜ್‍ಬೇದ್ರೆ, ಪರಿಸರ ತಜ್ಞ ಹೆಚ್.ಕೆ.ಎಸ್.ಸ್ವಾಮಿ, ಗಣಪತಿ ತಯಾರಕರುಗಳಾದ ಗುರುಮೂರ್ತಿ, ಓಂಕಾರಪ್ಪ, ಸತೀಶ್, ಮಂಜುನಾಥ್ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.