ಚಿತ್ರದುರ್ಗ: ಮಠ ಕಟ್ಟುವುದು ಎಷ್ಟು ಮುಖ್ಯವೋ ಘಟ ಕಟ್ಟುವುದು ಅಷ್ಟೆ ಮುಖ್ಯ. ಘಟ ದೊಡ್ಡದಾದರೆ ಮಠ ಬೆಳೆಯುತ್ತದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಮೇದಾರ ಜನಾಂಗಕ್ಕೆ ಕರೆ ನೀಡಿದರು.

ಸೀಬಾರ ಸಮೀಪವಿರುವ ಮೇದಾರ ಗುರುಪೀಠ ಕೇತೇಶ್ವರ ಮಹಾಮಠದಲ್ಲಿ ಶನಿವಾರ ನಡೆದ ಲಿಂಗ್ಯಕ್ಯ ಬಸವಪ್ರಭು ಕೇತೇಶ್ವರ ಮಹಾಸ್ವಾಮೀಜಿಯವರ ಐದನೆ ವರ್ಷದ ಪುಣ್ಯಸ್ಮರಣೆ ಹಾಗೂ ಮೇದಾರ ಜನಾಂಗದ ವಧು-ವರರ ಸಮಾವೇಶದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಸವಪ್ರಭು ಕೇತೇಶ್ವರ ಮಹಾಸ್ವಾಮೀಜಿಯವರಲ್ಲಿ ಜಾಗೃತಿಯಿದ್ದ ಕಾರಣ ಸಂಚಾರ ಮಾಡಿ ಜನಾಂಗವನ್ನು ಸಂಘಟನೆಗೊಳಿಸಿದರು. ಅಂರ್ತಮುಖಿ, ಸಮಾಜಮುಖಿ ಸಾಧನೆ ಸ್ವಾಮೀಜಿಗಳಿಗೆ ಬೇಕು. ಈ ಎರಡು ಸವಾಲುಗಳು ಸ್ವಾಮೀಜಿಗಳ ಮುಂದಿದೆ. ನಿಮ್ಮ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳನ್ನು ಹೇಗೆ ಜೋಪಾನ ಮಾಡುತ್ತೀರೋ ಅದೇ ರೀತಿ ಇಮ್ಮಡಿ ಬಸವ ಮೇದಾರ ಕೇತೇಶ್ವರಸ್ವಾಮಿಗಳನ್ನು ಜೋಪಾನ ಮಾಡಿ ಎಂದು ಮೇದಾರ ಜನಾಂಗಕ್ಕೆ ಸೂಚಿಸಿದರು.

ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರ ಸಂಸತ್ತು ವಿಪತ್ತುಗಳ ನಿವಾರಣೆಗೆ ಹೋರಾಟ ನಡೆಸಿತು. ಶರಣರು ಇರುವ ಕಡೆ ಸಾಮಾಜಿಕ ವಿಪತ್ತು, ನೂನ್ಯತೆ ಇರುತ್ತದೆ. ಶರಣರು ನಿಷ್ಟುರತೆ, ಪ್ರಾಮಾಣಿಕತೆಯಿಂದ ಎಲ್ಲವನ್ನು ನಿಭಾಯಿಸುತ್ತಿದ್ದರು. ಸಂಸತ್ತಿನ ಶರಣರು ಸಂಪತ್ತಾಗಿದ್ದರು. ಆದರೆ 21 ನೇ ಶತಮಾನದಲ್ಲಿ ಪ್ರತಿಯೊಬ್ಬರಿಗೂ ಸಂಪತ್ತಿನ ಚಿಂತೆ ಜಾಸ್ತಿಯಾಗಿ ನಾವೇ ಸಂಪತ್ತುಗಳಾಗಬೇಕು ಎನ್ನುವುದನ್ನು ಮರೆಯುತ್ತಿದ್ದಾರೆ ಎಂದು ವಿಷಾಧಿಸಿದರು.

ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಮಹಾಸ್ವಾಮೀಜಿ, ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮಿ , ಮೇದಾರ ಗುರುಪೀಠ ಕೇತೇಶ್ವರ ಮಹಾಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಅಖಿಲ ಕರ್ನಾಟಕ ಮೇದಾರ ಗುರುಪೀಠ ಕೇತೇಶ್ವರ ಟ್ರಸ್ಟ್‍ನ ಅಧ್ಯಕ್ಷ ಸಿ.ಪಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕುಂಬಯ್ಯ, ಎಂ.ಬಿ.ತಿಮ್ಮಣ್ಣ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.