ಚಿತ್ರದುರ್ಗ: ಒಂದು ಲಕ್ಷ ಬೀಜದುಂಡೆಗಳನ್ನು ಸಿದ್ದಪಡಿಸಿ ಅರಣ್ಯ ಪ್ರದೇಶ ಹಾಗೂ ಬೋಳುಗುಡ್ಡಗಳಲ್ಲಿ ಪಸರಿಸಿ ಪರಿಸರಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬುದು ನಮ್ಮ ಉದ್ದೇಶ ಎಂದು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸವಿತಸುನೀಲ್ ತಿಳಿಸಿದರು.
ಇನ್ನರ್‌ವೀಲ್ ಕ್ಲಬ್‌ನಿಂದ ಚಳ್ಳಕೆರೆ ಟೋಲ್‌ಗೇಟ್ ಸಮೀಪವಿರುವ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಎಂಟು ಮತ್ತು ಒಂಬತ್ತನೆ ತರಗತಿ ಮಕ್ಕಳಿಂದ ಬೀಜದುಂಡೆ ಸಿದ್ದಪಡಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಬರಪೀಡಿತ ಪ್ರದೇಶ ಚಿತ್ರದುರ್ಗದಲ್ಲಿ ಸಕಾಲಕ್ಕೆ ಮಳೆ ಬಾರದೆ ಇರುವುದಕ್ಕೆ ಗಿಡ-ಮರಗಳನ್ನು ನಾಶಪಡಿಸುತ್ತಿರುವುದೇ ಕಾರಣ. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಬೇಕಾಗಿದೆ. ಈಗಾಗಲೆ ನಲವತ್ತು ಸಾವಿರ ಬೀಜದುಂಡೆಗಳನ್ನು ಸಿದ್ದಪಡಿಸಲಾಗಿದ್ದು, ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸುವುದರಿಂದ ಮಾತ್ರ ಮುಂದಿನ ಪೀಳಿಗೆಗೆ ಪರಿಸರವನ್ನು ಸಂರಕ್ಷಿಸಬಹುದಾಗಿದೆ ಎಂದರು.
ಕಾರ್ಯದರ್ಶಿ ರೂಪವಿಶ್ವನಾಥ್ ಮಾತನಾಡುತ್ತ ಚಿತ್ರದುರ್ಗ ಜಿಲ್ಲೆ ಪ್ರತಿ ವರ್ಷವೂ ಬರಗಾಲವನ್ನು ಎದುರಿಸುತ್ತಿದೆ. ಅದಕ್ಕಾಗಿ ಪರಿಸರವನ್ನು ಉಳಿಸಬೇಕೆಂಬ ಜಾಗೃತಿಯನ್ನು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಇನ್ನರ್‌ವೀಲ್ ಕ್ಲಬ್ ಖಜಾಂಚಿ ಶೀಲನರೇಂದ್ರ, ಸುಮ ಅನಂತ್, ಅಂಬಿಕಹರೀಶ್, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾಮಲ್ಲಿಕಾರ್ಜುನ್, ಮೀನಾಕ್ಷಿ ಮೈಲೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.