ಚಿತ್ರದುರ್ಗ: ಭೂಸುಧಾರಣಾ ಕಾಯಿದೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯದಿದ್ದರೆ ರಾಜ್ಯಾದ್ಯಂತ ಜೈಲ್ ಭರೋ ಚಳುವಳಿ ಮೂಲಕ ಉಗ್ರ ಹೋರಾಟ ನಡೆಸಲಾಗುವುದೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಮೆಹಬೂಬ್ ಪಾಷ ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಭೂಸುಧಾರಣಾ ಕಾಯಿದೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರ ರೈತರಲ್ಲದವರಿಗೆ ಭೂಮಿ ಪರಭಾರೆ ಮಾಡಿದರೆ ಕಾಗೋಡಿಗಿಂತಲೂ ಭಿನ್ನವಾದ ಚಳುವಳಿ ಮಾಡಲು ನಮ್ಮ ಪಕ್ಷ ಸಿದ್ದವಾಗಿದೆ. ಉಳುವವನೇ ಭೂಮಿಯ ಒಡೆಯ ಎನ್ನುವ ಕಾಯಿದೆಯನ್ನು ಜಾರಿಗೆ ತಂದಿದ್ದು, ಕಾಂಗ್ರೆಸ್ ಪಕ್ಷ. ಆದರೆ ಈಗಿನ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ.ಯವರು ಬಡವರ ತುಂಡು ಭೂಮಿಯನ್ನು ಕಸಿದು ಶ್ರೀಮಂತರಿಗೆ ಕೊಡಲು ಹೊರಟಿದೆ. ಇದನ್ನು ನಾವುಗಳು ಸಹಿಸುವುದಿಲ್ಲ. ಪ್ರಧಾನಿ ಮೋದಿರವರು ಕೂಡಲೇ ಈ ಕಾಯಿದೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ಜು.೪ ರಿಂದ ಏಳರವರೆಗೆ ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಓ.ಬಿ.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷಿ, ಯೂತ್ ಕಾಂಗ್ರೆಸ್‌ನ ನಾಯ್ಡು, ಸಂದೀಪ್, ಕಾರ್ಮಿಕ ವಿಭಾಗದ ಮೋಹನ್ ಪೂಜಾರಿ ಇನ್ನು ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.