ಚಿತ್ರದುರ್ಗ: ಮಹಿಳಾ ಸಬಲೀಕರಣಕ್ಕಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದಕ್ಕಾಗಿ ಕೆ.ಎಸ್.ಆರ್.ಪಿ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್‌ರಾವ್‌ರವರ ನೇತೃತ್ವದಲ್ಲಿ ಬೆಳಗಾಂನಿಂದ ಬೆಂಗಳೂರಿಗೆ ಹೊರಟಿರುವ ಸೈಕಲ್ ಯಾತ್ರೆ ಶನಿವಾರ ಹಿರಿಯೂರು ತಾಲೂಕು ಐಮಂಗಲ ಪೊಲೀಸ್ ತರಬೇತಿ ಶಾಲೆಗೆ ಭೇಟಿ ನೀಡಿದ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ಕಹಳೆ, ವಾದ್ಯ, ಪೊಲೀಸ್ ಬ್ಯಾಂಡ್ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಐಮಂಗಲ ಪೊಲೀಸ್ ಠಾಣೆ ಮುಂಭಾಗ ತಳಿರು ತೋರಣಗಳಿಂದ ಸಿಂಗರಿಸಿದ್ದು, ರಸ್ತೆಯಲ್ಲಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಲಾಗಿತ್ತು. ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಗ್ರಾಮದ ಪ್ರಮುಖರು ಸೈಕಲ್ ಯಾತ್ರಾರ್ಥಿಗಳಿಗೆ ಗುಲಾಬಿ ಹೂಗಳನ್ನು ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಎ.ಡಿ.ಜಿ.ಪಿ.ಭಾಸ್ಕರ್‌ರಾವ್ ಮಾತನಾಡಿ ಬೆಳಗಾಂನಿಂದ ಬೆಂಗಳೂರಿಗೆ ೫೪೫ ಕಿ.ಮೀ. ಸೈಕಲ್‌ನಲ್ಲಿ ಹೊರಟಿದ್ದು, ಭಾನುವಾರ ಬೆಂಗಳೂರು ತಲುಪುತ್ತೇವೆ. ಕೆ.ಎಸ್.ಆರ್.ಪಿ. ೨ ಮತ್ತು ೪ ನೇ ಪಡೆ. ನಾಲ್ವರು ಮಹಿಳಾ ಐ.ಎ.ಎಸ್.ಅಧಿಕಾರಿಗಳು ಹಾಗೂ ಸಿವಿಲ್ ಎ.ಎಸ್.ಐ., ಪಿ.ಎಸ್.ಐ, ಪಿ.ಐ., ಇಬ್ಬರು ಎಸ್.ಪಿ.ಗಳು ಸೈಕಲ್ ಯಾತ್ರೆಯಲ್ಲಿ ನಮ್ಮೆ ಜೊತೆಗಿದ್ದಾರೆ. ಮಹಿಳೆಯರು ಮನಸ್ಸು ಮಾಡಿದರೆ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ ಎನ್ನುವುದನ್ನು ಸೈಕಲ್ ಯಾತ್ರೆಯಲ್ಲಿ ಹೊರಟಿರುವವರು ಸಾಬೀತು ಪಡಿಸಿದ್ದಾರೆ.ಮಹಿಳೆಯ ಸಬಲೀಕರಣ ಕೇವಲ ಮಹಿಳೆಯಿಂದ ಮಾತ್ರ ಸಾಧ್ಯವಿಲ್ಲ. ಪುರುಷರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪೊಲೀಸರೆಂದರೆ ಕೇವಲ ಕೈಯಲ್ಲಿ ಲಾಠಿ, ಬಂದೂಕು ಹಿಡಿದು ಭಯ ಹುಟ್ಟಿಸುವವರು ಎನ್ನುವ ವಾತಾವರಣವನ್ನು ಸಮಾಜದಿಂದ ತೊಡೆದು ಹಾಕಬೇಕು. ಸರ್ಕಾರ ಹಲವಾರು ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂಬುದಕ್ಕೆ ಈ ಸೈಕಲ್ ಯಾತ್ರೆಯೆ ಸಾಕ್ಷಿ ಎಂದು ಹೇಳಿದರು.
ಐ.ಎ.ಎಸ್.ಅಧಿಕಾರಿ ಫೌಜಿಯ ಮಾತನಾಡಿ ಸೈಕಲ್ ಯಾತ್ರೆ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಒತ್ತಾಯಿಸುವುದು ನಮ್ಮ ಉದ್ದೇಶ. ಇದು ಒಂದು ದಿನಕ್ಕೆ ಸೀಮಿತವಾಗಬಾರದು. ನಿರಂತರವಾಗಿರಬೇಕು. ಮಹಿಳಾ ಸಬಲೀರಣಕ್ಕೆ ಪುರುಷರ ಸಹಭಾಗಿತ್ವ ಅಗತ್ಯ ಎಂದು ಕೋರಿದರು.
ಐ.ಎ.ಎಸ್.ಅಧಿಕಾರಿಗಳಾದ ಚಾರುಲತ, ಶಿಲ್ಪ, ನಂದಿನಿ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರು ಹಾಗೂ ಎಸ್.ಪಿ. ಪಿ.ಪಾಪಣ್ಣ, ಡಿ.ವೈ.ಎಸ್.ಪಿ.ಶ್ರೀನಿವಾಸ್‌ಯಾದವ್, ಇನ್ಸ್‌ಪೆಕ್ಟರ್‌ಗಳಾದ ವಿಜಯ, ಪರಶುರಾಂ, ಸುರೇಶ್ ಹೆಳ್ಳೂರ್, ನಿವೃತ್ತ ಡಿ.ವೈ.ಎಸ್ಪಿ.ರುದ್ರಮುನಿ, ಕಾನೂನು ಅಧಿಕಾರಿ ಕೆ.ಎಸ್.ಸತೀಶ್, ಚಿತ್ರದುರ್ಗ ಡಿ.ವೈ.ಎಸ್ಪಿ. ಸಂತೋಷ್‌ಕುಮಾರ್, ಉಪನ್ಯಾಸಕರುಗಳಾದ ಅಮೂಲ್ಯ, ಭುವನೇಶ್ವರಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ಉಳಿಸಿ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಗಿಡ ಮರ ಬೆಳೆಸಿ ಮನುಕುಲ ಉಳಿಸಿ. ಸಂಚಾರಿ ನಿಯಮ ಪಾಲಿಸಿ ಜೀವ ಉಳಿಸಿ. ತೊಟ್ಟಿಲು ತೂಗುವ ಕೈ ದೇಶ ಆಳಲು ಸೈ. ನಮ್ಮ ಸುರಕ್ಷೆ ನಮ್ಮ ಕೈಯಲ್ಲಿ. ಬೇಡ ಬೇಡ ಡ್ರಗ್ಸ್ ಬೇಡ. ಮದ್ಯಪಾನಕ್ಕೆ ಹೇಳಿ ಗುಡ್ ಬೈ ಎಂಬ ನಾಮಫಲಕಗಳನ್ನು ಸೈಕಲ್ ಯಾತ್ರಾರ್ಥಿಗಳು ಕೈಯಲ್ಲಿ ಹಿಡಿದಿದ್ದರು.