ಚಿತ್ರದುರ್ಗ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ರೇವಣಸಿದ್ದಪ್ಪನವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ರೇವಣಸಿದ್ದಪ್ಪನವರು೨೦೧೮-೧೯ ರ ವಾರ್ಷಿಕ ಕಾರ್ಯಕ್ರಮಗಳ ಕುರಿತು ಸಮಾಲೋಚನೆ ನಡೆಸಿ ವಿಭಾಗೀಯ ಮಟ್ಟದ ಕಬ್ಸ್ ಬುಲ್‌ಬುಲ್‌ಗಳ ಪದಕ ತರಬೇತಿ ಶಿಬಿರವನ್ನು ನಡೆಸಬೇಕು. ಜಿಲ್ಲಾ ಮಟ್ಟದ ತೃತೀಯ ಸೋಪಾನ ಪರೀಕ್ಷಾ ಶಿಬಿರ, ಸ್ವಚ್ಚತಾ ಆಭಿಯಾನ ಕಾರ್ಯಕ್ರಮ, ಹೆಚ್.ಡಬ್ಲ್ಯು.ಬಿ.ತರಬೇತುದಾರರ ಸಭೆ ನಡೆಸುವ ಸಂಬಂಧ ಚರ್ಚಿಸಿದರು.
ತಾಲೂಕು ಮತ್ತು ಜಿಲ್ಲೆಯಲ್ಲಿ ಗೀತ ಗಾಯನ ಸ್ಪರ್ಧೆ, ತಾಲೂಕುವಾರು ಮೂಲ ತರಬೇತಿ ಶಿಬಿರ, ತಾಲೂಕು ಮತ್ತು ಜಿಲ್ಲಾ ಸಮಾವೇಶ, ಜಿಲ್ಲಾ ವಾರ್ಷಿಕ ಮಹಾಸಭೆಯ ಪೂರ್ವಸಭೆ, ಜಿಲ್ಲಾ ಸಂಸ್ಥೆಯ ಕೌನ್ಸಿಲ್ ಸಭೆ ಜುಲೈ ೩೦ ರೊಳಗೆ ಮುಗಿಯಬೇಕು. ಹೊಸದುರ್ಗ ಎಲ್.ಎಂ.ನಲ್ಲಿ ನಡೆದ ಮೂಲ ತರಬೇತಿ ಶಿಬಿರದ ಲೆಕ್ಕಪತ್ರಗಳ ಬಗ್ಗೆ ಹಾಗೂ ಹಣಕಾಸಿನ ಖರ್ಚು ವೆಚ್ಚಗಳಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಪದಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಚಳ್ಳಕೆರೆ ಯರ್ರಿಸ್ವಾಮಿ, ಜಿಲ್ಲಾ ಗೈಡ್ಸ್ ಆಯುಕ್ತೆ ಸುನಿತಾಮಲ್ಲಿಕಾರ್ಜುನ್, ಜಿಲ್ಲಾ ಸಂಸ್ಥೆ ಸಹ ಕಾರ್ಯದರ್ಶಿ ಡಾ.ರಹಮತ್‌ವುಲ್ಲಾ ವೇದಿಕೆಯಲ್ಲಿದ್ದರು. ಜಿಲ್ಲಾ ಸಂಸ್ಥೆ ಖಜಾಂಚಿ ಅನ್ವರ್‌ಪಾಷ, ಕರಿಸಿದ್ದಪ್ಪ, ಮಹೇಶ್, ನಿರ್ಮಲ ಬಸವರಾಜ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.