ಚಿತ್ರದುರ್ಗ: ಎಲ್ಲಾ ಅಪರಾಧಗಳನ್ನು ಕಾನೂನಿನಿಂದಲೆ ಸರಿಪಡಿಸುವುದು ಕಷ್ಟ. ಭಾರತೀಯರಲ್ಲಿ ಆಧ್ಯಾತ್ಮಿಕತೆ ಗಟ್ಟಿಯಾಗಿ ನೆಲೆಯೂರಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೆಗಡೆ ತಿಳಿಸಿದರು.

ಭಗವದ್ಗೀತಾ ಅಭಿಯಾನ ಕರ್ನಾಟಕ, ಜಗದ್ಗುರು ಶಂಕರಾಚಾರ್ಯ ಸೋಂದ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ, ಜಿಲ್ಲಾ ಭವದ್ಗೀತಾ ಅಭಿಯಾನ ಸಮಿತಿಯಿಂದ ವಾಸವಿ ಮಹಲ್‌ನಲ್ಲಿ ಶಿಕ್ಷಕರುಗಳಿಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಕೃಷ್ಣನೇ ಜಗದ್ಗುರುವಾಗಿರುವುದರಿಂದ ಭಗವದ್ಗೀತೆಯನ್ನು ಮುಖ್ಯವಾಗಿ ಶಿಕ್ಷಕರುಗಳಾದ ನೀವುಗಳು ಓದಿಕೊಂಡು ಅದರ ಸಾರವನ್ನು ಮಕ್ಕಳಿಗೆ ತಿಳಿಸಿ ಸರಿದಾರಿಯಲ್ಲಿ ಜೀವನ ನಡೆಸುವಂತೆ ಮಕ್ಕಳನ್ನು ತಯಾರು ಮಾಡುವಂತೆ ಹೇಳಿ ಈ ಅಭಿಯಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಮಾತನಾಡುತ್ತ ಹತ್ತು ವರ್ಷದ ಹಿಂದೆ ಚಿತ್ರದುರ್ಗದಲ್ಲಿ ಜಿಲ್ಲಾ ಮಟ್ಟದ ಭಗವದ್ಗೀತ ಅಭಿಯಾನವಾಗಿತ್ತು. ರಾಜ್ಯ ಮಟ್ಟದ ಅಭಿಯಾನ ಚಿತ್ರದುರ್ಗದಲ್ಲಿ ನಡೆಯಲಿದೆ. ಹಾಗಾಗಿ ಶಿಕ್ಷಕರುಗಳು ಭಗವದ್ಗೀತೆಯನ್ನು ಮೊದಲು ಕಲಿತು ನಂತರ ಮಕ್ಕಳಿಗೆ ತಿಳಿಸಿ ಜೀವನದಲ್ಲಿ ದುರಭ್ಯಾಸಗಳನ್ನು ತ್ಯಜಿಸುವಂತೆ ಗುರುಗಳ ಮೂಲಕ ಮಕ್ಕಳಿಗೆ ಕಲಿಸಬೇಕಾಗಿದೆ. ಇದರಿಂದ ಭಗವದ್ಗೀತೆಯ ಸಾರಾಂಶ ಮತ್ತು ಸ್ವಾರಸ್ಯವನ್ನು ಪ್ರತಿಯೊಬ್ಬರು ತಿಳಿದುಕೊಂಡರೆ ಜೀವನಕ್ಕೆ ಪ್ರಯೋಜನಕಾರಿಯಾಗಲಿದೆ ಎಂದರು.
ಕೆಲವೊಮ್ಮೆ ಗೊತ್ತಿಲ್ಲದೆ ಮನಷ್ಯ ತಪ್ಪು ಮಾಡುವುದುಂಟು. ಗೊತ್ತಿದ್ದು, ತಪ್ಪು ಮಾಡುವುದು ದೊಡ್ಡ ಅಪರಾಧ. ಅಂತಹ ಮನಸ್ಥಿತಿಗಳನ್ನು ಬದಲಾಯಿಸುವ ಶಕ್ತಿ ಭಗವದ್ಗೀತೆಯಲ್ಲಿದೆ ಎಂದು ಹೇಳಿದರು.
ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡುತ್ತ ಭಗವದ್ಗೀತಾ ಅಭಿಯಾನ ಯಾವುದೇ ಒಂದು ಧರ್ಮ ಪ್ರಚಾರಕ್ಕಾಗಿ ಮಾಡುವಂತದ್ದಲ್ಲ. ಇದರ ಸಾರ ಮನುಷ್ಯನ ಜೀವನಕ್ಕೆ ಅತ್ಯವಶ್ಯಕ ಎಂದು ಭಗವದ್ಗೀತೆಯ ಮಹತ್ವ ತಿಳಿಸಿದರು.
ಅ.೩೦ ರಂದು ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನ ಆರಂಭಗೊಂಡು ಡಿಸೆಂಬರ್ ೭ ರಂದು ಮುಕ್ತಾಯಗೊಳ್ಳಲಿದೆ. ಅದಕ್ಕೆ ಪೂರಕವಾಗಿ ಏರ್ಪಡಿಸಿರುವ ಕಾರ್ಯಾಗಾರದಲ್ಲಿ ಗಮನಕೊಟ್ಟು ಭಗವದ್ಗೀತೆಯ ಮಹತ್ವ ತಿಳಿದುಕೊಳ್ಳಿ ಎಂದು ಶಿಕ್ಷಕರುಗಳಿಗೆ ಸಲಹೆ ನೀಡಿದರು.

ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷರಾದ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ ಅಧ್ಯಕ್ಷತೆ ವಹಿಸಿದರು. ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿವಿಶ್ವನಾಥಶೆಟ್ಟಿ, ರಾಜೀವಲೋಚನ, ಮಾರುತಿ ಮೋಹನ್, ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಎಲ್.ಸುರೇಶ್‌ರಾಜು ಹಾಗೂ ಸಮಿತಿಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.