ಕಠ್ಮಂಡು: ಗೌತಮಬುದ್ಧನದು ಪರಮಾರ್ಥ ಸಾಧನೆ, ಮಾನವೀಯ ಬೋಧನೆ. ಬುದ್ಧನು ಜನಿಸದೇ ಇದ್ದಿದ್ದರೆ ಅಮಾನವೀಯ ಆಚರಣೆಗಳೇ ವಿಜೃಂಭಿಸುತ್ತಿದ್ದವು ಎಂದು ಮುರುಘಾಶರಣರು ಹೇಳಿದರು.

ಬಸವಕೇಂದ್ರ, ಶ್ರೀಮುರುಘಾಮಠದ ವತಿಯಿಂದ ನೇಪಾಳದ ಕಠ್ಮಂಡುವಿನ ಮಹದೇವ ಹೋಟೆಲ್‌ನಲ್ಲಿಂದು ಅಂತಾರಾಷ್ಟ್ರೀಯ ಏಕತಾ ಶರಣಮೇಳ-೨೦೧೮ ಕಾರ್ಯಕ್ರದಲ್ಲಿ ಮಾತನಾಡುತ್ತಿದ್ದರು. ಮಾನವ ಅನಾಗರೀಕನಾಗಿ ಉಳಿಯಬೇಕಾಗುತ್ತಿತ್ತೇನೋ? ಕಾರಣವೇನೆಂದರೆ, ಈತನ ಕಾಲದಲ್ಲಿ ಮಾನವರನ್ನು ಪಶುಗಳಂತೆ ಮಾರಾಟ ಮಾಡಲಾಗುತ್ತಿತ್ತು. ಮಹಿಳೆಯು ಎಲ್ಲಿಲ್ಲದ ಸಂಕಟ ಅನುಭವಿಸುತ್ತಿದ್ದಳು. ಅದನ್ನೆಲ್ಲ ತಡೆದಂತಹ ಕೀರ್ತಿ ಬುದ್ಧನಿಗೆ ಸಲ್ಲಿಸುತ್ತದೆ ಎಂದರು.

ಬುದ್ಧನು ಭಾರತದಿಂದ ಎದ್ದುಬಂದಂತಹ ಭವ್ಯಮಾನವ. ಪರಮಾರ್ಥದ ಮುಖಾಂತರ ಸಾಮಾಜಿಕ ಪರಿವರ್ತನೆ ಮಾಡಿದಂತಹ ಮಹಾಮಾನವ. ಪರಮಾನಂದವೇ ಬದುಕಿನ ಧ್ಯೇಯವಾಗಿದ್ದರು, ಅವನ ಆ ಪ್ರಭಾವವನ್ನು ನೋಡಿ ರಾಜಮಹಾರಾಜರು ಪರಿವರ್ತಿತರಾಗುತ್ತಾರೆ.

ಬುದ್ಧ ಜನಿಸಿದ ಭಾರತದಲ್ಲಿ ಮತ್ತೊಬ್ಬ ಸುಧಾರಕ ಕಂಡುಬರುತ್ತಾನೆ. ಹನ್ನೆರಡು ವರ್ಷದವನಿರುವಾಗಲೇ ಕಠಿಣತರವಾದ ಸಾಮಾಜಿಕ ಕಟ್ಟುಪಾಡುಗಳನ್ನು ಕಂಡು ಕೆರಳುತ್ತಾನೆ. ಅಂದಿನ ಸಂಪ್ರದಾಯಸ್ಥ ಸಮಾಜ ಮುಖಾಂತರ ಆತನಿಗೆ ಉಪನಯನವನ್ನು ನೆರವೇರಿಸಲು ಮುಂದಾಗುತ್ತದೆ. ಮಾತಾಪಿತರಾದ ಮಾದಲಾಂಬಿಕೆ ಮತ್ತು ಮಾದರಸರು. ಆಗ ಆ ಬಾಲಕ, ‘ನನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಮೊದಲು ಧಾರ್ಮಿಕ ಆಚರಣೆಯನ್ನು ನೆರವೇರಿಸಿ’ ಎಂದು ಕೇಳಿಕೊಳ್ಳುತ್ತಾನೆ. ತನ್ಮೂಲಕ ಸಮಾಜವನ್ನು ಪ್ರಶ್ನಿಸುತ್ತಾನೆ. ತಂದೆ-ತಾಯಿಗಳೊಟ್ಟಿಗೆ ಪುರೋಹಿತವರ್ಗವು ಕೂಡಿಕೊಂಡು- ‘ನಮ್ಮ ಜನಾಂಗದಲ್ಲಿ ಮಹಿಳೆಗೆ ಉಪನಯನ ನೀಡುವ ಪದ್ಧತಿ ಇರುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಪ್ರತಿವರ್ಷ ಮುರುಘಾಮಠದಿಂದ ಹೊರರಾಜ್ಯ ಮತ್ತು ಹೊರರಾಷ್ಟ್ರದಲ್ಲಿ ಏಕತಾ ಶರಣಮೇಳವನ್ನು ಜರುಗಿಸುತ್ತ ಬರಲಾಗಿದ್ದು, ಈ ಸಲ ನೇಪಾಳದ ಕಠ್ಮಂಡುವಿನಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆ ಭಾಗವಹಿಸಿರುವ ಮುಖ್ಯಅತಿಥಿಗಳ ಸಮ್ಮುಖದಲ್ಲಿ, ಓಂ ಸಾಯಿ ವಕೇಷನ್ಸ್ ಇವರ ಸಹಯೋಗದೊಂದಿಗೆ ಯಶಸ್ವಿಯಾಗಿ ಜರುಗುತ್ತಿರುವುದು ಒಂದು ಚರಿತ್ರಾರ್ಹ ಘಟನೆ ಎಂದರು.

ವೇದಿಕೆಯಲ್ಲಿ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ತಿಪಟೂರು ಷಡಕ್ಷರಮಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು, ವಾಲ್ಮೀಕಿ ಗುರುಪೀಠದ ಶ್ರೀ ವರದಾನೇಶ್ವರ ಮಹಾಸ್ವಾಮಿಗಳು ಮತ್ತು ಕಠ್ಮಂಡುವಿನ ಹಿಂದೂ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಮಾತ್ರಿಕ್ ಪ್ರಸಾದ್ ಇದ್ದರು. ಕರ್ನಾಟಕದಿಂದ ನೂರಾರು ಸಂಖ್ಯೆಯಲ್ಲಿ ತೆರಳಿದ್ದ ಭಕ್ತಾಧಿಗಳು ಭಾಗವಹಿಸಿದ್ದರು.