ಚಿತ್ರದುರ್ಗ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ವತಿಯಿಂದ ಅನುಷ್ಠಾನ ಗೊಳ್ಳುತ್ತಿರುವ  ಸಮೃದ್ಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರ ಮಾಡುವ ಪರಿಶಿಷ್ಟ ಪಂಗಡದ ಮಹಿಳಾ ವ್ಯಾಪಾರಿಗಳಿಗೆ ಪ್ರೋತ್ಸಾಹಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂ. 26 ಕೊನೆಯ ದಿನವಾಗಿದೆ.

2019-20 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ಉಪಯೋಜನೆಗಳಡಿ ಬಳಕೆಯಾಗದ ಅನುದಾನದಲ್ಲಿ ಬೀದಿ ಬದಿ ವ್ಯಾಪಾರ ಮಾಡುವ  ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಅಭಿವೃದ್ದಿಯೊಂದಲು ನಿಗಮದಿಂದ 10,000 ರೂ ಗಳ ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದೆ.  ಈ ಯೋಜನೆಗಾಗಿ ಅರ್ಜಿ ಆಹ್ವಾನಿಸಿದ್ದು, ಸೌಲಭ್ಯ ಪಡೆಯಲು ಪರಿಶಿಷ್ಠ ಪಂಗಡದ ಮಹಿಳೆಯರು ಮಾತ್ರ ಅರ್ಹರು.

ಅರ್ಜಿ ಸಲ್ಲಿಸಲು ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು. ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಪೌರಾಡಳಿತ ಇಲಾಖೆಯಲ್ಲಿ ನೊಂದಣಿ ಮಾಡಿಸಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಓ) ರವರಿಂದ ಬೀದಿಬದಿ ವ್ಯಾಪಾರಿ ಎಂದು ದೃಡೀಕರಿಸಿದ ದಾಖಲೆ ಹೊಂದಿರಬೇಕು.  ರಾಷ್ರೀಕೃತ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಖಾತೆ ಪುಸ್ತಕದ ನಕಲು ಪ್ರತಿ ಮತ್ತು ಬ್ಯಾಂಕಿನ ಹೆಸರು, ಐ.ಎಫ್.ಎಸ್.ಸಿ. ಕೋಡ್‍ನ ದಾಖಲೆ ಸಲ್ಲಿಸಬೇಕು. ಬಿ.ಪಿ.ಎಲ್. ಪಡಿತರ ಚೀಟಿ, ಆಧಾರ್‍ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು.  ಬೀದಿಬದಿ ವ್ಯಾಪಾರ ಮಾಡುತ್ತಿರುವ ಫಲಾನುಭವಿಯನ್ನೊಳಗೊಂಡ ಸ್ಥಳದ ಭಾವಚಿತ್ರ ಸಲ್ಲಿಸಬೇಕು. ಬ್ಯಾಂಕ್ ಖಾತೆಗೆ ಆದಾರ್ ಸಂಖ್ಯೆ ಜೋಡಣೆಯಾಗಿರಬೇಕು. ಯೋಜನೆಯಡಿ ಈ ಹಿಂದೆ ಸೌಲಭ್ಯ ಪಡೆದ ಮಹಿಳೆಯರು ಅರ್ಜಿ ಸಲ್ಲಿಸುವಂತಿಲ್ಲ.

ಅರ್ಹರು ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯಿಂದ ಮುದ್ರಿತ ಅರ್ಜಿ ಪಡೆದು, ಭರ್ತಿಮಾಡಿದ ಅರ್ಜಿಯನ್ನು ಅರ್ಹ ದಾಖಲೆಗಳೊಂದಿಗೆ ಜೂ.26 ರ ಸಂಜೆ 5.30 ರೊಳಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ 08194-235958, ಚಳ್ಳಕೆರೆ 08195-250291, ಹೊಳಲ್ಕೆರೆ 08191-275250, ಹೊಸದುರ್ಗ 08199-230212, ಹಿರಿಯೂರು 08193-263512, ಮೊಳಕಾಲ್ಮೂರು 08198-229565 ಕ್ಕೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.