ಚಿತ್ರದುರ್ಗ : ಅಕ್ಟೋಬರ್ 25 ರ‌ ಸಂಜೆಯಿಂದ ನನಗೆ ಅನೇಕ ಬಿಜೆಪಿ ಕಾರ್ಯಕರ್ತರು ಕಾಲ್,‌ ಮಿಸ್ಡ್ ಕಾಲ್ ಮಾಡುತ್ತಿದ್ದಾರೆ. ನಾನು ಹಲೋ ಎಂದು ಮಾತನಾಡಿದರೆ ಜೈಲು ಸೇರಿಲ್ಲವಲ್ಲ ಎಂದು ಖುಷಿಯಾಗುತ್ತಾರೆ. ನಾನು ಒಂದು ವೇಳೆ ಬಿಜಿಯಾಗಿದ್ದು ಕಾಲ್ ರಿಸೀವ್ ಮಾಡದಿದ್ದರೆ ಜೈಲು ಸೇರಿದ್ದೇನೆ ಅಂದುಕೊಂಡು ಮತ್ತೆ ಇತರೆ ನಾಯಕರ ಜೊತೆ ಮಾತನಾಡುತ್ತಿದ್ದಾರೆ ಎಂಬುದಾಗಿ ಖುದ್ದಾಗಿ ಚಿತ್ರದುರ್ಗ ಬಿಜೆಪಿ ಜಿಲ್ಲಾದ್ಯಕ್ಷ ಕೆ.ಎಸ್.ನವೀನ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು ತಮ್ಮದೇ ಶೈಲಿಯಲ್ಲಿ ಕಾರ್ಯಕರ್ತರ ಫೋನ್ ಕಾಲ್ ಮತ್ತು ‘ಅಂದರ್-ಬಾಹರ್’ ಪ್ರಹಸನವನ್ನು ಹೇಳಿದರು.

ಆಗಿದ್ದಿಷ್ಟು: ಬಿಜೆಪಿ ಜಿಲ್ಲಾದ್ಯಕ್ಷರಾದ ಕೆ.ಎಸ್.ನವೀನ್ ಉದ್ಯಮಿಯಾಗಿದ್ದು ನವೀನ್ ಹೋಟೆಲ್ ನಿರ್ದೇಶಕರೂ ಹೌದು. ಹೀಗಾಗಿ, ನವೀನ್ ಹೋಟೆಲ್ ಗೆ ಸಂಬಂಧಿಸಿದಂತೆ ಕಾರ್ಮಿಕ ರಾಜ್ಯ ವಿಮಾ ನಿಗಮಕ್ಕೆ 2012-13 ನೇ ಸಾಲಿನ 1.54.440 ರೂ. ವಿಮೆ ಹಣ ಕಟ್ಟದೆ ಲೋಪವೆಸಗಿದ್ದಾರೆನ್ನಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಜೆ.ಎಂ.ಎಫ್.ಸಿ ನ್ಯಾಯಾಲಯ ಅಕ್ಟೋಬರ್ 25 ರಂದು ತೀರ್ಪು ನೀಡಿದ್ದು 1ವರ್ಷ ಜೈಲು, 10 ಸಾವಿರ ಜೈಲು ಶಿಕ್ಷೆ ವಿಧಿಸಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಪರಿಣಾಮ ಬಿಜೆಪಿ ಕಾರ್ಯಕರ್ತರು ಜಿಲ್ಲಾದ್ಯಕ್ಷ ನವೀನ್ ಗೆ ಫೋನ್ ಮಾಡುತ್ತಿದ್ದಾರಂತೆ. ಹೀಗಾಗಿ, ಇಂದು ಸುದ್ದಿಗೋಷ್ಠಿ ನಡೆಸಿದ ಕೆ‌.ಎಸ್.ನವೀನ್ ಕೋರ್ಟ್ ತೀರ್ಪಿನ ಬಳಿಕ ಅದೇ ದಿನ ಜಾಮೀನು ಪಡೆದಿದ್ದು  ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು