ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಿ.ಹೆಚ್.ತಿಪ್ಪಾರೆಡ್ಡಿ ಸೋಮವಾರ ಸಹಸ್ರಾರು ಅಭಿಮಾನಿಗಳೊಂದಿಗೆ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ದಾವಣಗೆರೆ ರಸ್ತೆಯಲ್ಲಿರುವ ನಿವಾಸದಿಂದ ಬೆಳಿಗ್ಗೆ ತೆರೆದ ವಾಹನದಲ್ಲಿ ಅಪಾರ ಅಭಿಮಾನಿಗಳೊಡನೆ ಮೆರವಣಿಗೆ ಮೂಲಕ ಆಗಮಿಸಿದ ಜಿ.ಹೆಚ್.ತಿಪ್ಪಾರೆಡ್ಡಿ ರಸ್ತೆಯ ಎರಡು ಬದಿಗಳಲ್ಲಿ ನಿಂತು ವೀಕ್ಷಿಸುತ್ತಿದ್ದ ಜನರತ್ತ ಕೈಬೀಸಿ ಮತಯಾಚಿಸಿದರು.
ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಹದಿನೆಂಟು ದಿನಗಳು ಬಾಕಿಇರುವುದರಿಂದ ಜಿ.ಹೆಚ್.ತಿಪ್ಪಾರೆಡ್ಡಿರವರು ನಾಮಪತ್ರ ಸಲ್ಲಿಕೆಗೆ ಹೊರಟ ಮೆರವಣಿಗೆಯನ್ನು ಗಮನಿಸಿದರೆ ಎದುರಾಗಳಿಗೆ ಬಲಪ್ರದರ್ಶನ ಮಾಡಿದಂತಿತ್ತು.
ಬಿಸಿಲ ದಗೆಯನ್ನು ಲೆಕ್ಕಿಸದೆ ಸಾವಿರಾರು ಮಹಿಳೆಯರು, ಚಿಕ್ಕ ಚಿಕ್ಕ ಮಕ್ಕಳು ಕೈಯಲ್ಲಿ ಬಿಜೆಪಿ ಭಾವುಟಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುತ್ತ ತಿಪ್ಪಾರೆಡ್ಡಿರವರಿಗೆ ಜೈಕಾರಗಳನ್ನು ಹಾಕುತ್ತಿದ್ದರೆ ಗಾಂಧಿವೃತ್ತ ಹಾಗೂ ಎಸ್.ಬಿ.ಎಂ.ಸರ್ಕಲ್‌ನಲ್ಲಿ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಒಂದರ್ಥದಲ್ಲಿ ಹೇಳಬೇಕೆಂದರೆ ಚುನಾವಣೆಯಲ್ಲಿ ಗೆದ್ದೆಬಿಟ್ಟೀದ್ದೇವೆ ಎನ್ನುವ ಖುಷಿ ಮೆರವಣಿಗೆಯಲ್ಲಿದ್ದ ಅಭಿಮಾನಿಗಳ ಮುಖದಲ್ಲಿ ಎದ್ದುಕಾಣುತ್ತಿತ್ತು. ಕೆಲವರು ಬೃಹತ್ ಗಾತ್ರದ ಭಾವುಟಗಳನ್ನು ಹಿಡಿದು ಸಾಗುತ್ತಿದ್ದರೆ ಮಕ್ಕಳು ಚಿಕ್ಕ ಚಿಕ್ಕ ಭಾವುಟಗಳನ್ನು ಕೈಯಲ್ಲಿಡಿದಿದ್ದರು. ಇನ್ನು ಕೆಲವರು ಬಿಸಿಲ ಝಳಕ್ಕೆ ತಾಳದೆ ಕೇಸರಿ ಟೋಪಿಗಳನ್ನು ತಲೆಗೆ ಧರಿಸಿದ್ದರು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಕುಡಿಯುವ ನೀರಿನ ಪ್ಯಾಕೆಟ್‌ಗಳ ವ್ಯವಸ್ಥೆ ಮಾಡಲಾಗಿತ್ತು.ದಾವಣಗೆರೆ ರಸ್ತೆಯಿಂದ ಹಿಡಿದು ಗಾಂಧಿವೃತ್ತ, ತಾಲೂಕು ಕಚೇರಿ, ಅಂಬೇಡ್ಕರ್ ವೃತ್ತ, ಒನಕೆ ಓಬವ್ವ ವೃತ್ತದಲ್ಲಿ ಜನಜಂಗುಳಿ ಜಮಾಯಿಸಿತ್ತು. ಎಲ್ಲೆಂದರಲ್ಲಿ ದ್ಚಿಚಕ್ರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕಣ್ಣು ಹಾಯಿಸಿದಷ್ಠು ಜನಸಾಗರವೇ ಕಾಣುತ್ತಿತ್ತು. ಮೆರವಣಿಗೆಯ ಮಧ್ಯದಲ್ಲಿ ಅಲ್ಲಲ್ಲಿ ಪೊಲೀಸ್ ತುಕಡಿಗಳು ಹಾಗೂ ಅರೆಸೇನಾಪಡೆಗಳು ಬಿಗಿ ಬಂದೋಬಸ್ತ್‌ನಲ್ಲಿ ತೊಡಗಿದ್ದವು.
ಜಿ.ಎಂ.ಸುರೇಶ್, ಶ್ಯಾಮಲಶಿಪ್ರಕಾಶ್, ರೇಖ, ತಿಪ್ಪೇಸ್ವಾಮಿ, ಸುರೇಶ್‌ಸಿದ್ದಾಪುರ, ಮುರಳಿ ಇನ್ನು ಮುಂತಾದವರು ಮೆರವಣಿಗೆಯಲ್ಲಿದ್ದರು.