ಚಿತ್ರದುರ್ಗ: ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಜೋಗಿಮಟ್ಟಿ ರಸ್ತೆಯಲ್ಲಿರುವ ಮಾಸ್ತಮ್ಮಲೇಔಟ್‌ನಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿರವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಭೂಮಿಪೂಜೆಯ ನಂತರ ಮಾತನಾಡಿದ ಶಾಸಕರು ಒಂದು ಕೋಟಿ ತೊಂಬತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ವಿಶಾಲವಾದ ಹಾಗೂ ಗುಣಮಟ್ಟದ ಹಾಸ್ಟೆಲ್ ನಿರ್ಮಿಸಲಾಗುವುದು. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಸರ್ಕಾರಿ ಬಾಲಕಿಯರ ಕಾಲೇಜಿನ ಪರಿಶಿಷ್ಟ ವರ್ಗದ ಬಾಲಕಿಯರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಬೇಕಾಗಿರುವುದರಿಂದ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಪರಿಶಿಷ್ಟ ವರ್ಗಗಳ ಇಲಾಖೆ ಹಣ ಪಾವತಿಸಿ ನಿವೇಶನವನ್ನು ಪಡೆದುಕೊಂಡಿದೆ ಎಂದು ಹೇಳಿದರು.
ಕೆಲವು ಕಾಲೇಜುಗಳಲ್ಲಿ ಕೊಠಡಿಯ ಸಂಖ್ಯೆಯೂ ಕಡಿಮೆಯಿದೆ. ಅದೇ ರೀತಿ ಹಾಸ್ಟೆಲ್ ಸೌಲಭ್ಯಗಳಿಂದ ಕೆಲವು ವಿದ್ಯಾರ್ಥಿನಿಯರು ವಂಚಿತರಾಗಿದ್ದಾರೆ. ಅಂತಹ ವಿದ್ಯಾರ್ಥಿನಿಯರನ್ನು ಗುರುತಿಸಿ ಇಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಟೆಲ್‌ನಲ್ಲಿ ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಚೈತ್ರ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ನಿರ್ಮಿತಿ ಕೇಂದ್ರದ ಮೂಡಲಗಿರಿಯಪ್ಪ ಹಾಗೂ ಮಾಸ್ತಮ್ಮ ಲೇಔಟ್‌ನ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.