ಚಿತ್ರದುರ್ಗ: ಚಿತ್ರದುರ್ಗ ಕೆಎಸ್‍ಆರ್‍ಟಿಸಿ ವತಿಯಿಂದ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ಸೇರಿದಂತೆ ಆರು ತಾಲ್ಲೂಕುಗಳಲ್ಲಿ ಬಸ್‍ಗಳ ಓಡಾಟ ಪ್ರಾರಂಭಗೊಂಡಿದ್ದು, ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಪ್ರಯಾಣಿಕರ ಆರೋಗ್ಯ ಹಿತದೃಷ್ಟಿಯಿಂದ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಅಳವಡಿಸಿರುವ ಬ್ರೇಕಿಂಗ್ ಸ್ಯಾನಿಟೈಜರ್ ಯಂತ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸುಮಾರು 46 ದಿನಗಳ ಲಾಕ್‍ಡೌನ್ ಮುಗಿದ ನಂತರ ಜಿಲ್ಲೆಯು ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಬಸ್‍ಗಳ ಸಂಚಾರ ನಡೆಯಲಿದೆ. ಬಸ್‍ನಲ್ಲಿ ಶೇ 50 ರಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕು. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬಸ್ ನಿಲ್ದಾಣದಲ್ಲಿ ಯಂತ್ರದ ಮೂಲಕ ಸ್ಯಾನಿಟೈಜರ್‍ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಂಡು ಪ್ರಯಾಣಿಸಬೇಕು ಎಂದು ಹೇಳಿದರು.
ಕೋವಿಡ್-19 ನಿಯಂತ್ರಣದಲ್ಲಿ ಜಿಲ್ಲಾಡಳಿತದ ಮಾರ್ಗದರ್ಶನದ ಮೇರೆಗೆ ಜಿಲ್ಲೆಯ ಆರೋಗ್ಯ ಇಲಾಖೆಯೊಂದಿಗೆ ಇತರೆ ಇಲಾಖೆಯವರು ನೀಡಿರುವ ಸಹಕಾರ ಮತ್ತು ಸಮನ್ವಯತೆಯಿಂದ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸುವಂತಾಗಿದೆ ಎಂದು ಡಾ. ಪಾಲಾಕ್ಷ ಅಭಿಪ್ರಾಯಪಟ್ಟರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ ಮಾತನಾಡಿ, ನೆರೆಹೊರೆಯ ಜಿಲ್ಲೆಗಳಾದ ದಾವಣಗೆರೆ, ಬಳ್ಳಾರಿ, ತುಮಕೂರು ಹಾಗೂ ಆಂಧ್ರದ ಅನಂತಪುರ ಜಿಲ್ಲೆಗಳಲ್ಲಿ ಸಾಕಾಷ್ಟು ಕೋವಿಡ್-19 ಪ್ರಕರಣಗಳು ಕಂಡು ಬಂದಿದೆ.  ಹೀಗಾಗಿ ನೆರೆಹೊರೆಯ ಜಿಲ್ಲೆಯಿಂದ ಈ ಜಿಲ್ಲೆಗೆ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯ ಜನ ಆತಂಕ ಪಡದೆ ಸ್ವಚ್ಛತೆ ಮತ್ತು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದಲ್ಲಿ ಜಿಲ್ಲೆಯನ್ನು ಕೊನೆಯವರೆಗೂ ಹಸಿರುವಲಯದಲ್ಲಿ ಇರುವಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಖಾಸಿಂಸಾಬ್,  ಜಿಲ್ಲಾ ಮೇಲ್ವಿಚಾರಕ ಎಂ.ಬಿ.ಹನುಮಂತಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಾನಕಿ, ಮೂಗಪ್ಪ, ಆರ್‍ಬಿಎಸ್‍ಕೆ ವೈದ್ಯಾಧಿಕಾರಿಗಳಾದ ಡಾ.ಸುಪ್ರಿತಾ, ಡಾ.ವಾಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು..