ಚಿತ್ರದುರ್ಗ: ನಗರದ ಬವೇಶ್ವರ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು,

ದಿ. ೮-೯-೨೦೨೦ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಲೋಕಾರ್ಪಣೆಗೊಳಿಸುವರು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರೀ ಮುರುಘರಾಜೇಂದ್ರ ಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಕೊರೋನಾ ಕೇಸ್‌ಗಳು ದಿನದಿಂದ ದಿನಕ್ಕೆ ವಿಶ್ವ, ರಾಷ್ಟ್ರ, ರಾಜ್ಯ ಹಾಗು ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿದ್ದು ಹೆಚ್ಚಿನ ಆತಂಕ ಸೃಷ್ಟಿಯಾಗುತ್ತಿದೆ. ಹಾಗಾಗಿ ನಾವು ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡುವ ಕಾರಣಕ್ಕಾಗಿ ಈ ಸೆಂಟರ್‌ನ್ನು ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರು, ವೈದ್ಯಕೀಯ ಸಚಿವರು, ಸಂಸದರು, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಬಸವೇಶ್ವರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ|| ಪ್ರಶಾಂತ್ ಮಾತನಾಡಿ, ಕೋವಿಡ್ ಟೆಸ್ಟ್ ಅಂದರೆ ನಮ್ಮಲ್ಲಿ ದಿನಕ್ಕೆ ೩೦೦ ಜನರಿಗೆ ಟೆಸ್ಟ್ ಮಾಡಬಹುದು. ದಿನದ ೨೪ ಗಂಟೆ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತದೆ. ಸರ್ಕಾರ ಈಗಾಗಲೇ ಆರ್‌ಟಿಪಿಸಿಗೆ ೩೦೦೦ ರೂ. ಅಂತಿಮಗೊಳಿಸಿದೆ. ಅಷ್ಟೇ ಹಣವನ್ನು ನಾವು ತೆಗೆದುಕೊಳ್ಳುತ್ತೇವೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ಹೆಚ್ಚಿನ ಕೋವಿಡ್ ಟೆಸ್ಟ್ ಇದ್ದರೆ ನಮ್ಮಲ್ಲಿ ಕಳುಹಿಸಿದರೆ ನಾವು ಟೆಸ್ಟ್ ಮಾಡಿಕೊಡುತ್ತೇವೆ ಜ್ವರ, ಕೆಮ್ಮು, ನೆಗಡಿ ಇದೆಯೋ ಅವರು ಬಂದು ಟೆಸ್ಟ್ ಮಾಡಿಸಿಕೊಳ್ಳಬಹುದು. ನಮ್ಮಲ್ಲಿ ೨೫ ವೆಂಟಿಲೇಟರ್‌ಗಳಿದ್ದು ಕೋವಿಡ್ ರೋಗಿಗಳಿಗೆ ೬ ವೆಂಟಿಲೇಟರ್‌ಗಳನ್ನು ಕೊಡಲು ಸಿದ್ಧರಿದ್ದು, ಆಯುಷ್ಮಾನ್ ಭಾರತ ಸೌಲಭ್ಯವಿದ್ದು ಅದು ಕೋವಿಡ್‌ಗೂ ಅನ್ವಯಿಸುತ್ತದೆ ಎಂದರು.

ಗೋಷ್ಠಿಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಪ್ರಶಾಂತ್, ವೈದ್ಯಕೀಯ ಅಧೀಕ್ಷಕರಾದ ಡಾ|| ಪಾಲಾಕ್ಷಯ್ಯ ಮೊದಲಾದವರಿದ್ದರು.